ಮೀನ ಕಣ್ಣುಗಳು

ಹಾಡು ಕೇಳುತ್ತಿದೆ, ಗುಲಾಂ ಆಲಿಯದು, “ನಿನ್ನೂರಿಗೆ ನಾ ಬಂದಿಹೆ, ಯಾತ್ರಿಕನ ತರಹ..” ಮರೆಯ ಬೇಕೆಂದರೂ ಆಕೆ ನೆನಪಾಗುತ್ತಾಳೆ, ಈ ಹಾಡು ಕೇಳಿದಾಗ.

*

“ಮಗೂ ಆ ಪೆನ್ ಅಂಕಲ್ ಗೆ ಕೊಡು”

“ಇರಲಿ, ಮಗುವಿನ ಬಳಿ” ಅನ್ನುತ್ತೇನೆ. ನನ್ನ ನೆನಪಿಗಾಗಿ ಅನ್ನುತ್ತೇನೆ ನನಗೇ ಕೇಳಿಸದಷ್ಟು ಮೆಲ್ಲಗೆ.

*

ಸುಮಾರು ನಲವತ್ತು ವರ್ಷಗಳ ಕೆಳಗೆ, ಸುರತ್ಕಲ್ಲಿನಲ್ಲಿ ನಾನು ನಾಲ್ಕನೆಯ ವರ್ಷದಲ್ಲಿ ಓದುತ್ತಿದ್ದೆ. ಕಾಲೇಜಿನ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದ ಭಾಷಣ ಸ್ಪರ್ಧೆಯಲ್ಲಿ ನಾನು ದ್ವಿತೀಯ, ಆ ಹುಡುಗಿ, ಸುಮ ಮೊದಲನೆಯವಳು. ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ಪ್ರಮ ಬಿ.ಎ. ಓದುತ್ತಿದ್ದ ಹುಡುಗಿಯ ಕೈಯಲ್ಲಿ ನಾನು ಸೋತಿದ್ದೆ. ಹಿಂದಿನ ವರ್ಷವೂ ನಾನು ದ್ವಿತೀಯ, ಆದರೆ, ನಾನು ಸೋತಿದ್ದು ನಮ್ಮದೇ ಕಾಲೇಜಿನ ನನ್ನ ಸೀನಿಯರ್ ಗೆ. ಆಗ ನಾಚಿಗೆಯಾಗಿರಲಿಲ್ಲ. ಈ ಸಲ ಬಹಳ ನಾಚಿಗೆ. ಹುಡುಗಿಯೊಬ್ಬಳಿಗೆ ಸೋತಿದ್ದು, ಅದೂ ನನಗಿಂತ ಕಿರಿಯ ಹುಡುಗಿಗೆ.

ಕೊನೆಯ ವರ್ಷದಲ್ಲಿದ್ದೇನೆ. ಕಾಲೇಜು ಆರಂಭವಾಗಿದ್ದು ಅಷ್ಟೇ. ಸಾಯಂಕಾಲ ಸಮುದ್ರ ಕಿನಾರೆಗೆ ಮತ್ತು ಬಳಿ ಇರುವ ದೇವಸ್ಥಾನಕ್ಕೆ ಹೋದೆ. ಆ ಕಾಲದಲ್ಲಿ ಹುಡುಗಿಯರು ಇಂಜನಿಯರಿಂಗ್ ಮಾಡುತ್ತಿರಲಿಲ್ಲ. ಹಾಗಾಗಿ ನಾವು ಹುಡುಗರು ಬೀಚಿಗೆ, ದೇವಸ್ಥಾನಕ್ಕೆ ಹೋಗುತ್ತಿದ್ದುದು ಯಾರಾದರೂ ಹುಡುಗಿಯರು ಬಂದರೆ ಕೀಟಲೆ ಮಾಡಲು. ಕೀಟಲೆ ಅಂದರೆ ದೂರದಿಂದ ಸಿಳ್ಳು ಹೊಡೆಯುವುದು, ಯಾವುದಾದರೂ ಸಿನೇಮಾ ಹಾಡು ಹೇಳುವುದು ಅಷ್ಟೆ.

ಆ ದಿನ ಏನೋ ವಿಶೇಷ. ದೇವಸ್ಥಾನದಲ್ಲಿ ಬಹಳ ಜನರಿದ್ದರು. ನನಗೆ ಯಾರೋ ಹಲೋ ಅಂದ ಹಾಗೆ. ಅದೂ ಹೆಣ್ಣಿನ ದ್ವನಿ. ಅತ್ತಿತ್ತ ನೋಡಿದಾಗ, ಉದ್ದ ಲಂಗ ತೊಟ್ಟ, ಗಿಡ್ಡ ಹುಡುಗಿ. ನನ್ನತ್ತ ಪರಿಚಯದ ನಗು ಬೀರುತ್ತಿದ್ದಾಳೆ.

ಸುಮ ನನ್ನ ಹತ್ತಿರ ಬರುತ್ತಾಳೆ. ಆಕೆಯ ಬಳಿ ಆಕೆಯ ತಾಯಿ. ಸಾಧಾರಣ ಸೀರೆ ಉಟ್ಟಿದ್ದ ತನ್ನ ತಾಯಿಯ ಬಳಿ ನನ್ನ ಪರಿಚಯ ಹೇಳುತ್ತಾಳೆ. ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದರು ಎಂದು ಮಾತ್ರ ಹೇಳುತ್ತಾಳೆ. ನಾನು ಅವರಿಗೆ ಕೈ ಮುಗಿದೆ. ಬಾಯಿ ಮಾತಿಗೆ ಅವರು, “ನಮ್ಮ ಮನೆಗೆ ಬನ್ನಿ” ಅನ್ನುತ್ತಾರೆ. ಪ್ರಾಯಶಃ ಅವರಿಗೆ ಮಗಳು ನನ್ನೊಡನೆ ಮಾತನಾಡುವುದು ಇಷ್ಟವಾಗಿರಲಿಲ್ಲ.

ನಮಗೆ ಹುಡುಗಿಯೊಬ್ಬಳ ಜೊತೆ ಮಾತನಾಡುವುದೇ ದೊಡ್ಡ ಥ್ರಿಲ್. ಯಾಕೋ ಆ ದಿನ ನನಗೆ ಓದಲಾಗಲಿಲ್ಲ. ನನ್ನ ಕಣ್ಣ ಮುಂದೆ ಬರುತ್ತಿದ್ದದ್ದು ಆಕೆಯ ಸುಂದರ ಮೀನ ಕಣ್ಣುಗಳು. ಕಥೆ ಪುಸ್ತಕಗಳಲ್ಲಿ ಮೀನ ಕಣ್ಣಿನ ಬಗ್ಗೆ ಓದಿದ್ದೆ. ಆದರೆ, ಮೀನ ಕಣ್ಣುಗಳು ಇಷ್ಟೊಂದು ಆಕರ್ಷಕವಾಗಿರ ಬಹುದು ಎಂದು  ಗೊತ್ತಾದದ್ದು ಇಂದೆ.  ನಸುಗಪ್ಪು ಬಣ್ಣದ ಕುಳ್ಳಿ ಹುಡುಗಿಯ ಕಣ್ಣುಗಳು ನನ್ನನ್ನು ಆ ದಿನ ಓದಲು ಬಿಡಲಿಲ್ಲ. ನನ್ನ ರೂಂ ಮೇಟ್, ಏನು ಶೆಟ್ರೇ, “ಅವಳದೇ ಚಿಂತೆ..ಅವಳ ರೂಪ…” ಕನ್ನಡ ಚಿತ್ರದ ಹಾಡು ಹೇಳತೊಡಗಿದ.

“ಆಕೆ ಗಿಡ್ಡ, ಕಪ್ಪು, ಆ ಇನ್ನೊಸೆಂಟ್ ಸ್ಕರ್ಟ್ (ಉದ್ದ ಲಂಗಕ್ಕೆ ನಾವಿರಿಸಿದ್ದ ಹೆಸರು). ನೀವು ಉದ್ದ ಇದ್ದೀರಿ, ಬಿಳಿ ಇದ್ದೀರಿ, ಮುಂಬಾಯಿಂದ ಬಂದವರು, ಸ್ಮಾರ್ಟ್ ಇದ್ದೀರಾ. ಆಕೆ ಬಲೆ ಬೀಸಿರ ಬಹುದು ಜಾಗೃತೆ…” ಏನೇನೋ ತಮಾಶೆ ಮಾತನಾಡಿದ. ನನಗೋ ಒಳ ಒಳಗೇ ಖುಶಿ.

ಮುಂದೆ ಒಂದೆರಡು ತಿಂಗಳು ನನಗೆ ಆಕೆ ಸಿಗಲಿಲ್ಲ. ಹತ್ತಿರವೇ ಇರುವ ಗೋವಿಂದದಾಸ ಕಾಲೇಜಿನ ಬಳಿ ಹೋಗಿ ಆಕೆಗಾಗಿ ಕಾಯುವಷ್ಟು ಧೈರ್ಯ ನನ್ನಲ್ಲಿ ಇರಲಿಲ್ಲ.

ಪುನಹ ಆಕೆ ಸಿಕ್ಕಿದ್ದು ಅದೇ ದೇವಸ್ಥಾನದಲ್ಲಿ. ಒಂದು ನಗು ಮಾತ್ರ. ನನಗೆ ನಗಲೂ ಹೆದರಿಕೆ. ನಾನು ಒಂದು ಪೆದ್ದ ನಗು ನಕ್ಕಿರಬೇಕು. ದೇವರಿಗೆ ಸುತ್ತು ಬರುವಾಗ, ದೇವಸ್ಥಾನದ ಹಿಂದೆ ನನಗಾಗಿ ನಿಂತಿರ ಬೇಕು. ಆಕೆಯ ಬಳಿ ಬಂದಾಗ ಆಕೆ ಯಾವ ಅಳುಕೂ ಇಲ್ಲದೆ, “ನಾಳೆ ರಜೆ. ಬೆಳಿಗ್ಗೆ ನಮ್ಮ ಮನೆಗೆ ಬನ್ನಿ. ಹತ್ತು ಘಂಟೆಗೆ ಕೆಳಗೆ ಕಾಯುತ್ತಿರುತ್ತೇನೆ. ಬೇಕಿದ್ದರೆ, ನಿಮ್ಮ ಗೆಳೆಯನನ್ನೂ ಕರೆತನ್ನಿ” ಎಂದು ನನ್ನ ಬಳಿ ಇದ್ದ ರೂಂ ಮೇಟ್ ನತ್ತ ಕೈ ತೋರಿಸಿದಳು.

ಅಬ್ಬಾ, ಈ ಹುಡುಗಿಯ ಧೈರ್ಯವೇ! ಆಕೆ ಎಲ್ಲರ ಮುಂದೆ ಮಾತನಾಡುವಾಗ, ನನಗೆ ಸಣ್ಣ ನಡುಕ. ಒಂದಿಬ್ಬರು ಗೊತ್ತಿದ್ದ ಪ್ರೊಫ಼ೆಸರುಗಳು ಸಹ ದೇವಸ್ಥಾನದಲ್ಲಿ, ತಮ್ಮ ಸಂಸಾರದೊಂದಿಗೆ ಬಂದಿದ್ದರು. ಆಯಿತು ಅನ್ನುವಂತೆ ತಲೆಯಾಡಿಸಿದೆ.

ಮರುದಿನ ನಾನೊಬ್ಬನೇ ಆಕೆಯ ಮನೆಯತ್ತ ಹೋದೆ. ದೇವಸ್ಥಾನದ ಬಳಿ ಇರುವ ತೋಟದಲ್ಲಿ, ಸ್ವಲ್ಪ

ಮುಂದೆ ಅವರ ಮನೆ. ಆ ದಿನ ಅಸಮಧಾನ ವ್ಯಕ್ತ ಪಡಿಸಿದ್ದ ಆಕೆಯ ತಾಯಿ, ನಗು ನಗುತ್ತಾ ನನ್ನನ್ನು ಸ್ವಾಗತಿಸಿದರು. ಮನೆಯಲ್ಲಿ ತಾಯಿ ಮಗಳಿಬ್ಬರೇ. ಸುಮಳ ಅಪ್ಪ ಒಂದೆರಡು ವರ್ಷಗಳ ಹಿಂದೆ ತೀರಿಕೊಂಡಿದ್ದರಂತೆ. ತೆಂಗಿನ ತೋಟವಿದೆ. ತವರಿನಿಂದ ಅಕ್ಕಿ ಇತ್ಯಾಧಿ ಬರುತ್ತದೆಯಂತೆ. ಇರಲಿ, ಅದೆಲ್ಲಾ ಇಲ್ಲಿ ಬೇಕಿಲ್ಲ.

ಆಕೆಯ ತಾಯಿ ಒಂದು ತಟ್ಟೆಯಲ್ಲಿ ಪಾಯಸ ತಂದಿಟ್ತರು. (ಆ ದಿನ ಯಾಕೆ ರಜವೆಂದು ನೆನಪಾಗುತ್ತಿಲ್ಲ). ನನ್ನ ಮುಖ ನೋಡಿ, ಇವತ್ತು ಸುಮಳ ಜನ್ಮ ದಿನ ಅಂದರು. ತಾರೀಕು ನೆನಪಿದೆ: ನನ್ನ ಪ್ರಿಯ ಲೇಖಕ ಡಾ ಶಿವರಾಮ ಕಾರಂತರ ಜನುಮ ದಿನ ಸಹ ಅಂದೇ, ಅಕ್ಟೋಬರ್ ಹತ್ತು. ಅವರಿಬ್ಬರಿಗೂ ಅದನ್ನೇ ಹೇಳಿದಾಗ, “ಹೌದೇ..” ಅನ್ನುವ ಉದ್ಗಾರ ಅವರ ಬಾಯಿಯಲ್ಲಿ. ಸುಮಳಿಗೂ ಕಾರಂತ ಮತ್ತು ಭೈರಪ್ಪನವರೂ ಇಷ್ಟವೆಂದಳು.

ಆಕೆಯ ತಾಯಿ ನನ್ನ ಊರು,ಮನೆತನ, ತಂದೆ ತಾಯಿಯ ವಿಚಾರ ಎಲ್ಲ ತಿಳಕೊಂಡರು.

ಸುಮಾ, “ಅಮ್ಮಾ, ನಾ ಇವರನ್ನು ಕರೆದುದಕ್ಕೆ, ಏನೆಲ್ಲಾ ಕಥೆ ಕಟ್ಟಿಕೊಳ್ಳ ಬೇಡ. ಅವರ ಮನೆಯ ವಿಷಯ ನಿನಗ್ಯಾಕೆ?” ಅಂದಳು. ನನ್ನ ಮನಸ್ಸಿನ ಒಳಗೇ ಇದ್ದ ಸಂತೋಷ ಎಲ್ಲಾ ಟುಸ್ಸ್ ಎಂದಿತು. ಆಕೆಗೆ ನನ್ನ ಬಗ್ಗೆ ಯಾವ ಭಾವನೆ ಇದೆ?

ಮುಂದೆ ಒಂದೆರಡು ಸಲ ಅವರ ಮನೆಗೆ ಹೋದೆ. ಅವಳ ತಾಯಿ ಇರುವಾಗಲೇ ಹೋದದ್ದು. ಓದಿನ ಬಗ್ಗೆ, ಕಾರಂತರ, ಭೈರಪ್ಪನವರ ಕಾದಂಬರಿಗಳ ಬಗ್ಗೆ ಮಾತುಕತೆ ನಡೆಯುತ್ತಿತ್ತು. ನನ್ನ ಮನಸ್ಸಿನಲ್ಲಿ ಈ ಹುಡುಗಿಯೇ ನನ್ನ ಬಾಳ ಸಂಗಾತಿಯಾಗಲಿ ಅನ್ನುವ ಒಂದು ಬಯಕೆ. ಮನಸ್ಸಿನಲ್ಲಿ ಯಾವ ಕೆಟ್ಟ ವಿಚಾರವೂ ಹೊಳೆದಿರಲಿಲ್ಲ. ನಾನಾಕೆಗೆ ಒಮ್ಮೆಯೂ ನನ್ನ ಭಾವನೆಗಳನ್ನು ಹೇಳಿರಲಿಲ್ಲ. ಆಕೆಯೂ ಏನೂ ಹೇಳಿರಲಿಲ್ಲ.

ಆಕೆಯ ಆ ಮೀನು ಕಣ್ಣಿನ ಆಕರ್ಷಣೆ ನನ್ನಲ್ಲಿ ಕಡಿಮೆಯಾಗಿರಲಿಲ್ಲ. ಕಾಲೇಜು ಮುಗಿದು ಹೊರ ಬರುವಾಗ, ನಾನು ಐ ಲವ್ ಯೂ ಅನ್ನಬೇಕೆಂದುಕೊಂಡಿದ್ದೆ. ನನಗೆ, ಆಕೆಯ ಮುಖ, ಆಕೆಯ  ಮುಗ್ದ ನಗು ಕಂಡಾಗ ಆ ಮಾತನ್ನು ಹೇಳಲು ಧೈರ್ಯ ಬರಲಿಲ್ಲ. ಹಾಗೆಯೇ ಹಿಂದೆ ಬಂದೆ. ಹಿಂದೆ ತಿರುಗಿ ನೋಡಿದಾಗ ಆಕೆ ಕಣ್ಣೀರು ಸುರಿಸುತ್ತಿದ್ದುದು ಗೊತ್ತಾಯಿತು. ನಿಂತೆ. ಹಿಂದೆ ಹೋಗಿ, ನನ್ನ ಮನದ ಇಂಗಿತ ತಿಳೀಸೋಣ ಅಂದುಕೊಂಡೆ. ಪುನಹ ನಗುತ್ತಾ ಆಕೆ ಕೈ ಬೀಸಿದಳು. ನಾ ಹಾಗೆಯೇ ಹಿಂದೆ ಬಂದೆ.

ನಂತರ ನಾನು ಮುಂಬಾಯಿಗೆ ಬಂದೆ. ಆಕೆಯ ಬಳಿ ನನ್ನ ವಿಳಾಸವಿದ್ದರೂ, ನಮ್ಮಿಬ್ಬರ ನಡುವೆ ಯಾವುದೇ

ಪತ್ರ  ವ್ಯವಹಾರ ನಡೆಯಲಿಲ್ಲ. ಹುಟ್ಟು ಹಬ್ಬಕ್ಕೆ ಮಾತ್ರ ಗ್ರೀಟಿಂಗ್ ಕಾರ್ಡ್ ಗಳ ವಿನಿಮಯ.

ಅಪ್ಪ, ಅಮ್ಮ ನನ್ನ ಮದುವೆಯ ಪ್ರಸ್ತಾಪ ಮಾಡಿದಾಗ, ನಾನು ಸುಮಳ ಬಗ್ಗೆ ಮಾತನಾಡಿದೆ.

“ಯಾರು, ಸುರತ್ಕಲ್ಲಿನ ಹುಡುಗಿಯೇ? ಬೇಡ. ನಮ್ಮದೇ ಜಾತಿ ಹೌದು. ನಮ್ಮ ಮನೆಯ ಅಂತಸ್ತೇನು, ಅವರದೇನು? ಹೊಂದಾಣಿಕೆ ಆಗುವುದಿಲ್ಲ”

ಸುಮಳ ಅಮ್ಮ, ನಮ್ಮಿಬ್ಬರ ಮದುವೆಯ ಪ್ರಸ್ತಾಪ ಮಾಡಿರಬೇಕು. ಅಮ್ಮ ನಿರಾಕರಿಸಿರಬೇಕು. ಕೈ ತುಂಬಾ ಸಿಗಬಹುದಾದ ವರದಕ್ಷಿಣೆಯ ಆಸೆ ಅವಳಲ್ಲಿದ್ದಿರಬಹುದು.

ನನ್ನ ಯಾವ ವಾದವನ್ನೂ ಅಮ್ಮ ಒಪ್ಪಲಿಲ್ಲ. ಅಪ್ಪನೂ ಅಮ್ಮನದೇ ಪಾರ್ಟಿ. ಅಪ್ಪನ ಮುಂದೆ ವಾದಿಸುವ ಛಾತಿ ನನ್ನಲ್ಲಿ ಇಲ್ಲ. ನಾನೊಬ್ಬ ಹೆದರು ಪುಕ್ಕ.

ಮದುವೆಯಾಗದೇ ಕುಳಿತೆ. ಯಾವ ಹೆಣ್ಣನ್ನೂ ನೋಡಲಿಲ್ಲ. ಒಂದು ದಿನ ಆಕೆಯ ಮದುವೆಯ ಕರೆಯೋಲೆ ಬಂತು. ಅದರೊಂದಿಗೆ ಸಣ್ಣ ಪತ್ರ, ಮದುವೆಗೆ ಬಂದು ಆಶೀರ್ವದಿಸ ಬೇಕೆಂದು. ಕೊನೆಯಲ್ಲಿ “ನಿಮ್ಮ ತಂಗಿ” ಎಂದು ಬರೆದಿದ್ದಳು. ಅದರ ಮೇಲೆ ನೀರ ಹನಿ ಬಿದ್ದ ಕಲೆ.

ಆಕೆಯ ಮದುವೆಗೆ ನಾ ಹೋಗಲಿಲ್ಲ.

*

ಮುಂದೆ ನಾನೂ ಮದುವೆಯಾದೆ. ಒಳ್ಳೆಯ ಹಾಗೂ ಸುಂದರ ಹುಡುಗಿ ಸಿಕ್ಕಿದಳು. ಆದರೆ, ಆಗಾಗ ಸುಮಳ ನೆನಪು. ಪುನಹ ಹೇಳುತ್ತೇನೆ, ಎಂದಿಗೂ ಸುಮಳನ್ನು ಕೆಟ್ಟ ದೃಷ್ಟಿಯಿಂದ ನೋಡಿಲ್ಲ, ಯೋಚಿಸಿಲ್ಲ.

*

ವರ್ತಮಾನಕ್ಕೆ ಬರೋಣ.

ಮೊನ್ನೆ ಮೇ ತಿಂಗಳಲ್ಲಿ ಊರಿಗೆ ಹೋಗಿದ್ದೆ. ಯಾವುದೋ ಕೆಲಸಕ್ಕೆ ಮಂಗಳೂರಿಗೆ ಹೋಗಿದ್ದೆ. ಹೆಜಮಾಡಿಗೆ (ನನ್ನ ಊರು) ಹಿಂದೆ ಬರುವಾಗ, ಸುರತ್ಕಲ್ಲಿನ ಕಾಲೇಜು ಬಳಿ ಇಳಿದೆ.  “ನಿಮ್ಮ ಟಿಕೇಟು ಮುಲ್ಕಿಗೆ ಅಲ್ಲವಾ?” ಕಂಡಕ್ಟರ್ನ ಮಾತು.

ಸುಮಳನ್ನು ಒಮ್ಮೆ ಕಾಬೇಕು ಅನ್ನುವ ತೀವ್ರವಾದ ಮನಸ್ಸಿನ ಒತ್ತಡ. ಅದರ ಜೊತೆಗೆ ಗುಲಾಂ ಆಲಿಯ ಹಾಡು

ತಲೆಯಲ್ಲಿ ಗುಣು ಗುಣಿಸುತ್ತಿದೆ. ಸೀದಾ ಆಕೆಯ ಮನೆಯತ್ತ ಹೋದೆ. ಸುಮಳ ತಾಯಿ ಮನೆಯ ಹೊರಗೆ ಒಂದು ಪುಟ್ಟ ಮಗುವಿನ ಜೊತೆ ಇದ್ದರು. ಕೂದಲು ಬಿಳಿಯಾಗಿದೆ, ಮುಖದಲ್ಲಿ ನೆರಿಗೆಗಳು, ಕಣ್ಣಿಗೆ ಕನ್ನಡಕ. ನನ್ನನ್ನು ಸ್ವಲ್ಪ ಹೊತ್ತು ನೋಡುತ್ತಾರೆ. ನನ್ನ ಪರಿಚಯವಾಗುತ್ತದೆ. “ಒಳಗೆ ಬಾ” ಅಂದರು.

.ಹೊರ ಚಾವಡಿಯಲ್ಲಿ ಒಂದು ಗಂಡಸಿನ ಚಿತ್ರಕ್ಕೆ ಹಾರ ಹಾಕಿದ್ದರು. ಅದರ ಕೆಳಗೆ ಸುಮಾರು ಮೂರು ವಾರದ ಹಿಂದಿನ ದಿನಾಂಕ.

ಮಗು ಒಳ ಬಂತು. ಸುಮಳ ಮಗಳ ಮಗುವಂತೆ. ಗೊತ್ತಿಲ್ಲದೇ ಹೋಯಿತು. ಮಗುವಿಗೆ ಚಾಕಲೇಟ್ ಆದರೂ ತರಬೇಕಿತ್ತು.

ಮಗುವಿಗೆ ಬಾ ಅಂದೆ. ಬಳಿ ಬಂತು. ಎತ್ತಿಕೊಂಡೆ. ಮಗು ನನ್ನ ಅಂಗಿಯ ಕಿಸೆಗೆ ಕೈ ಹಾಕಿ, ಪೆನ್ನು ತೆಗೆದು ಅದರೊಂದಿಗೆ ಆ ಆಡತೊಡಗಿತು. ಅಗುವಿನ ಕೆನ್ನೆಗೆ ಮುತ್ತಿಕ್ಕಲು, ಅದರ ಮುಖವನ್ನು ನನ್ನತ್ತ ತಿರುಗಿಸಿದೆ. ಅದೇ ಮೀನು ಕಣ್ಣುಗಳು. ಮಗುವಿಗೆ ಮುತ್ತಿಕ್ಕದೆ, ಅದನ್ನು ಎದೆಗೆ ಅಪ್ಪಿ ಕೊಂಡೆ.

ನಾನು ಹೊರಡುತ್ತೇನೆ. ಸುಮ ಹೊರ ಬಂದಿರುವುದಿಲ್ಲ. ಆಕೆಯ ಅಮ್ಮ, “ಸುಮಾ..” ಅನ್ನುತ್ತಾರೆ. ನಾನು, “ಬೇಡವಮ್ಮ..” ಅನ್ನುತ್ತೇನೆ. ಆಕೆಯ ಅಮ್ಮ ನನ್ನ ತೇವವಾದ ಕಣ್ಣುಗತ್ತ ನೋಡುತ್ತಾರೆ, ನಾನು ಮಗುವಿನ ಮೀನ ಕಣ್ಣುಗಳತ್ತ ನೋಡುತ್ತೇನೆ.

 

*

18.08.2016

ಗುಪ್ತ ನಿಧಿ

17.01.2016

 

ಗುಪ್ತ ನಿಧಿ

 

 

ಹೆಂಡತಿ ಮತ್ತು ಮಕ್ಕಳಿಬ್ಬರೂ ವಿದೇಶಕ್ಕೆ ಹೋಗಿದ್ದಾರೆ. ಮನೆಯಲ್ಲಿ ನಾನೊಬ್ಬನೇ. ನನ್ನ ಪಾಸ್ಪೋರ್ಟ್ ನ ವಾಯಿದೆ ಮುಗಿದ ಕಾರಣ ನಾನು ಹೋಗಲಿಲ್ಲ.

 

ಎಳ್ಳಮವಾಸ್ಯೆಯ ನಾಲ್ಕು ದಿನ ಮೊದಲು, ಬೆಳಿಗ್ಗೆ ಎದ್ದು ಪೇಪರ್ ಓದುತ್ತಾ ಇದ್ದೆ. ಯಾರೋ ಕರೆ ಘಂಟೆ ಒತ್ತಿದ ಸದ್ದು. ಯಾರಪ್ಪಾ ಅನ್ನುತ್ತಾ ಬಾಗಿಲು ತೆರೆದರೆ ಒಬ್ಬ ಸನ್ಯಾಸಿ ನಿಂತಿದ್ದ.

 

ನಿಮ್ಮ ಮುಖದಲ್ಲಿ ಅನಿರೀಕ್ಷಿತ ಹಣ ದೊರಕುವ ಯೋಗದ ಕಳೆ ಇದೆ, ಎಂದು ಆತ ಅಂದಾಗ ಭಿಕ್ಷೆ ಕೇಳಲು ಬಂದ ಸನ್ಯಾಸಿ ಎಂದು ಬಾಗಿಲು ಹಾಕುವವ. ನನಗೆ ಯಾವ ದಾನವೂ ಬೇಡ. ನಿಮ್ಮ ಕೈಯಲ್ಲಿ ಎರಡು ಧನ ರೇಖೆ ಇದೆ, ಗರುಡ ಮಚ್ಚೆ ಇದೆ ಅಂದಾಗ ನಾನು ತಬ್ಬಿಬ್ಬಾದೆ.

 

ಕೈ ತೋರಿಸಿ ಅವಲಕ್ಷಣ ಕೇಳುವ ಅಭ್ಯಾಸ ನನಗಿಲ್ಲ. ಚಿಕ್ಕವನಿದ್ದಾಗ ನನ್ನ ಮಾವನವರು ಇದೇ ಮಾತು ಅಂದಿದ್ದ ನೆನಪಾಯಿತು.

 

 

 

ನಿಮಗೆ ನಿಧಿ ಸಿಕ್ಕ ಮೇಲೆ. ನಿಮಗೆ ಇಷ್ಟ ಬಂದಷ್ಟು ನನಗೆ ಕೊಡಿ. ಈಗ ಒಂದು ಪೈಸೆ ಸಹ ಕೊಡಬೇಡಿ.

 

ನಿಮ್ಮದು ಬಹು ಹೆಸರುವಾಸಿಯಾದ ಮನೆತನ. ನಿಮ್ಮ ಊರು………ನಲ್ಲಿ ನಿಮ್ಮ ಮನೆ ಪಾಳು ಬಿದ್ದಿದೆ. ನಿಮ್ಮ ಕುಟುಂಬದವರು ಯಾರೂ ಊರಲ್ಲಿ ಇಲ್ಲ, ಎಲ್ಲಾ ಪರ ಊರು ಸೇರಿದ್ದಾರೆ.

 

ಆತ ತನ್ನ ಜೋಳಿಗೆಯಿಂದ ಒಂದು ಪುಸ್ತಕ ಹೊರ ತೆಗೆದ. ಅದರ ಪುಟ ತಿರುವುತ್ತಾ ಹೋದ. ಅದರಲ್ಲಿ ದಾನ ಮಾಡಿದ ಜನರ ಹೆಸರಿತ್ತು. ಈಗ ನನ್ನಲ್ಲೂ ಕೇಳುತ್ತಾನೆಂದು ಕೊಂಡೆ. ಆತ ಒಂದು ಖಾಲಿ ಹಾಳೆ ತೆಗೆದು ಒರಟು ಒರಟಾಗಿ ಒಂದು ನಕ್ಷೆ ಬರೆದ. ಇದು ನಿಮ್ಮ ಮನೆ. ಈ ಗೋಡೆ ಬಿದ್ದಿದೆ. ಒಳ ಚಾವಡಿಯ ಒಂದು ಜಾಗ ತೋರಿಸಿ, ಇಲ್ಲಿ ನಿಧಿ ಇದೆ. ಮೂರು ವರ್ಷ ಹಿಂದೆ ನಿಮ್ಮವರೊಬ್ಬರು ಇಲ್ಲಿನ ನಿಧಿ ತೆಗೆಯಲು ಹೋಗಿ, ಹಾವು ಕಡಿದು ಸತ್ತರು. ಅಲ್ಲಿ ಇನ್ನೂ ಅವರು ಉಪಯೋಗಿಸಿದ ಹಾರೆ, ಪಿಕ್ಕಾಸುಗಳು ಬಿದ್ದು ಕೊಂಡಿವೆ. ಅವರಿಗೆ ಆ ನಿಧಿ ದೊರಕುವ ಯೋಗ ಇರಲಿಲ್ಲ. ಹಾಗಾಗಿ, ಹಾವಿನಿಂದ ಕಡಿಸಿಕೊಂಡು ಸತ್ತರು.

 

ನಿಮಗೆ ಆ ಯೋಗ ಇದೆ. ನಿಮ್ಮ ಬಲಗೈಯಲ್ಲಿ ಎರಡು ಧನ ರೇಖೆ ಇದೆ ಅಂದೆ. ಅದರಲ್ಲಿ ಒಂದು ರೇಖೆನಿಮ್ಮ ಸಂಪಾದನೆ. ಇನ್ನೊಂದು ರೇಖೆ ಆಕಸ್ಮಿಕ ಧನ ಸಿಗುವ ಯೋಗ. ನಿಮ್ಮ ಕೈಯಲ್ಲಿ ಗರುಡ ಮಚ್ಚೆ ಸಹ ಇದೆ. ನಾಗರ ಹಾವು ನಿಮಗೆ ಏನೂ ಮಾಡುವುದಿಲ್ಲ. ನೀವು ಅಲ್ಲಿಗೆ ಹೋದಾಗ, ಅವು ನಿಮ್ಮನ್ನು ಕಂಡು ದೂರ ಹೋಗುತ್ತವೆ.

 

ನೀವು ನಾಡದು ಎಳ್ಳಮವಾಸ್ಯೆಯ ದಿನ ನಿಮ್ಮ ಊರಿನ ಸಮೀಪದ ಪಟ್ಟಣಕ್ಕೆ ಹೋಗಿ ಹೋಟೇಲಿನಲ್ಲಿ ಇರಿ. ಆ ದಿನ ಸಮುದ್ರ ಸ್ನಾನ ಮಾಡಿದರೆ ಒಳ್ಳೆಯದು. ನೀವು ಸಹ ಮಾಡಿ. ರಾತ್ರಿ, ಹನ್ನೊಂದು , ಹನ್ನೊಂದೂವರೆಗೆ ನಿಮ್ಮ ಹಳ್ಳಿಗೆ ಮುಟ್ಟುವಂತೆ ಬಸ್ಸಿನಲ್ಲಿ ಹೋಗಿ. ಅಗೆಯಲು ಯಾವುದೇ ಸಾಮಾಗ್ರಿ ಒಯ್ಯುವುದು ಬೇಡ. ಎಲ್ಲಾ ಅಲ್ಲಿಯೇ ಇವೆ.

 

ನಾನು ನಿಮ್ಮನ್ನು ಮರುದಿನ ಬೆಳಿಗ್ಗೆ ಭೇಟಿಯಾಗಿ, ನೀವು ಸಂತೋಷವಾಗಿ ಕೊಡುವ ಯಾವ ಕಾಣಿಕೆಯನ್ನೂ ಸ್ವೀಕರಿಸುತ್ತೇನೆ. ಆ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸುತ್ತೇನೆ. ಇಷ್ಟು ಹೇಳಿ ಆ ಸನ್ಯಾಸಿ, ಹಿಂದೆ ನೋಡದೆ ಸಹ ಹೋದ. ನಾನು ಮಂತ್ರಮುಗ್ದನಂತೆ ಕೇಳುತ್ತಲೇ ಇದ್ದೆ.

 

*

 

ಹೇಗೂ ಮನೆಯಲ್ಲಿ ನಾನೊಬ್ಬನೇ. ಆದದ್ದು ಆಗಲಿ ಎಂದು ನಾನು ಊರಿಗೆ ಹೊರಟೆ. ರಾತ್ರಿ ಹಳ್ಳಿಗೆ ಹೋಗುವಾಗ, ಮುನ್ನೆಚ್ಚರಿಕೆಗಾಗಿ ಕೆಳ ಕಾಲ ಬಳಿ ಹಾಕಿದ್ದ ಕಾಲು ಚೀಲದ ನಡುವೆ ದೊಡ್ಡ ಚೂರಿಯೊಂದನ್ನು ಬಚ್ಚಿಟ್ಟುಕೊಂಡೆ.

 

ಬಸ್ಸಿನಿಂದ ಇಳಿದು ಮನೆಯ ಕಡೆ ಚಿಕ್ಕ ಓಣಿಯಲ್ಲಿ ನಡೆವಾಗ, ಎದೆಯಲ್ಲಿ ಒಂದು ತರಹದ ಅವ್ಯಕ್ತ ಭಯ. ಚಂದಿರನಿಲ್ಲದ ರಾತ್ರಿ. ಕೈಯಲ್ಲಿ ಪುಟ್ಟ ಟಾರ್ಚ್. ಕೀಟಗಳ ಸಂಗೀತ. ಆಗಾಗ ಕಚ್ಚುವ ಸೊಳ್ಳೆಗಳು. ದೂರದಲ್ಲಿ ಊಳಿಡುವ ನಾಯಿಯ ದನಿ. ಪೊದೆಗಳು ಸಹ ಕೆಲವೊಮ್ಮೆ ಬಿಳಿ ಬಣ್ಣದಾಗಿ ತೋರಿ, ದೆವ್ವದ ಭಯ ಹುಟ್ಟಿಸುತ್ತಿದ್ದವು.

 

ಮನೆಯ ಹತ್ತಿರ ಬಂದೆ. ಮನೆ ಪಾಳು ಬಿದ್ದಿದೆ. ಸನ್ಯಾಸಿ ಹೇಳಿದ್ದಂತೆ, ಗೋಡೆಯೊಂದು ಬಿದ್ದಿತ್ತು. ಅಲ್ಲಿಂದ ಒಳ ಹೊಕ್ಕೆ. ಆತ ಹೇಳಿದಂತೆಯೇ, ಒಂದೆಡೆ ನೆಲ ಅಗಿದಿತ್ತು. ಅದರ ಹತ್ತಿರದಲ್ಲಿ ಹಾರೆ, ಪಿಕ್ಕಾಸು ಬಿದ್ದಿತ್ತು. ನಾನು ಅದರ ಬಳಿ ಹೋದಂತೆ, ಅಲ್ಲಿಂದ ಎರಡು ಎಳೆ ನಾಗರ ಹಾವುಗಳು, ಒಮ್ಮೆ ಹೆಡೆ ಎತ್ತಿ ನನ್ನನ್ನು ನೋಡಿ ದೂರ ಹೋದವು. ಆದರೆ, ಅವು ಸ್ವಲ್ಪ ದೂರ ಹೋಗಿ, ನನ್ನತ್ತ ನೋಡುತ್ತ ನಿಂತು ಬಿಟ್ಟವು. ನಾನು ಅವುಗಳಿಗೆ ಮುಖ ಮಾಡಿ, ನೆಲ ಅಗೆಯ ತೊಡಗಿದೆ.

ಒಮ್ಮೆಲೇ ಟಣ್ ಅನ್ನುವ ಸದ್ದು. ನಾನು ಅಗೆಯುವುದನ್ನು ನಿಲ್ಲಿಸಿ, ಕೈಯಿಂದ ಮಣ್ಣು ಸವರಿ, ಒಂದು ಪೆಟ್ಟಿಗೆ ಹೊರ ತೆಗೆದೆ. ನನ್ನ ಮುಂದೆ ಇದ್ದ ಎರಡೂ ನಾಗರ ಹಾವುಗಳು ಅಲ್ಲಿ ಕಾಣಲಿಲ್ಲ.

 

ಯಾರೋ ನನ್ನ ಬೆನ್ನು ತಟ್ಟಿದ ಅನುಭವ. ಹಿಂದೆ ನೋಡಿದೆ. ಅದೇ ಸನ್ಯಾಸಿ, ಇಬ್ಬರು ದಾಂಡಿಗರೊಂದಿಗೆ ಅಲ್ಲಿ ನಿಂತಿದ್ದ. ನನ್ನನ್ನು ನೋಡಿ ಎದೆ ನಡುಗುವಂತೆ ಜೋರಾಗಿ ನಗತೊಡಗಿದ.

 

 

17.01.2016

*

05.02.2016

ನನ್ನ ಭವಿಷ್ಯ ಹೇಳಿದ್ದ ಸನ್ಯಾಸಿಗೆ ತನ್ನ ಭವಿಷ್ಯದ ಅರಿವಿರಲಿಲ್ಲ.

 

ನೆಲ ಅಗೆಯುವಾಗ ನನ್ನ ಮುಂದೆ ಇದ್ದ ನಾಗರ ಹಾವುಗಳೀಗ ಸನ್ಯಾಸಿ ಮತ್ತೊಬ್ಬ ದಾಂಡಿಗನ ಹಿಂದೆ ಹೆಡೆ ಎತ್ತಿ ನಿಂತಿವೆ.

ಸೈತಾನ

13.01.2016

ಸೈತಾನ

——–

 

ಹಿಂದೆ ಕಾಲೇಜು ದಿನಗಳಲ್ಲಿ ಸೈತಾನನ ಉಪದೇಶದ ಪುಟ್ಟ ಕಥೆ ಓದಿದ್ದೆ.

ಅದೇ ಕಥೆಯನ್ನು ನನ್ನದೇ ರೀತಿಯಲ್ಲಿ ಪುನಹ ಬರೆಯುತ್ತಿದ್ದೇನೆ ಅಥವಾ ಸೈತಾನ ಬರೆಯಲು ಪ್ರೇರೇಪಿಸುತ್ತಿದ್ದಾನೆ.

 

ಸೈತಾನ ಆತನಿಗೆ ತನ್ನ ತಂದೆ ತಾಯಿಯರನ್ನು ಕೊಲ್ಲಲು ಹೇಳಿದಾಗ, ತನ್ನನ್ನು ಅಷ್ಟೊಂದು ಪ್ರೀತಿಯಿಂದ ಸಾಕಿದ ತಂದೆ ತಾಯಿಯರನ್ನು ಕೊಲ್ಲಲು ನಿರಾಕರಿಸುತ್ತಾನೆ. ಹೆಂಡತಿಗೆ ಹೊಡೆ ಅಂದಾಗಲೂ ಆತ ನಿರಾಕರಿಸಿದ. ಕೊನೆಗೆ ಸೈತಾನ ಸರಾಯಿ ಕುಡಿಯಲು ಹೇಳುತ್ತಾನೆ. ಅದಕ್ಕೆ ಆತ  ಒಪ್ಪಿದ.

 

**

 

 

ಆಫೀಸಿನಲ್ಲಿ ತುಂಬಾ ಕೆಲಸ. ಹಿಂದೆ ಬರುವಾಗ ರಸ್ತೆಯಲ್ಲಿ ವಿಪರೀತ ವಾಹನಗಳು. ತಲೆ ಚಿಟ್ಟು ಹಿಡಿದು ಹೋಯಿತು. ಮನೆಗೆ ಬಂದು ಸ್ವಲ್ಪ ಹೊತ್ತು ಮಲಗಿಕೊಂಡ.

ಎದ್ದಾಗ ರಾತ್ರಿ ಎಂಟು. ಜನೇವರಿಯ ಚಳಿ ಬೇರೆ.

ಟೀಚರ್ಸ್ ಸ್ಕಾಚ್ ತೆಗೆದು ಗಾಜಿನ ಲೋಟಕ್ಕೆ ಸುರುವಿಕೊಂಡ. ಸೋಡಾ ಹಾಕಿಕೊಂಡು, “ಅಮ್ಮಾ, ನೀ ಊಟ ಮಾಡಿ ಮಲಗಮ್ಮ. ಇವತ್ತು ತುಂಬಾ ಸುಸ್ತಾಗಿದೆ. ನಾಳೆ ನಿನ್ನೊಡನೆ ಮಾತನಾಡುತ್ತೇನೆ” ಅಂದ.

 

“ಹೆಚ್ಚು ಕುಡಿಯಬೇಡ, ಮಗಾ..” ಅನ್ನುತ್ತಾ ಆಕೆ ಅಡುಗೆ ಮನೆಗೆ ಹೋದಳು. ಹೆಂಡತಿ ಆಕೆಗೆ ಬಡಿಸುವ ಸದ್ದು ಕೇಳಿಸುತ್ತದೆ.

ಸ್ವಲ್ಪ ಹೆಚ್ಚೇ ಕುಡಿದ. ಹೆಂಡತಿ ಸಾಕು ಮಾಡಿ ಅಂದಾಗ ಏನೋ ನೆನಪಾಗಿ, ತನ್ನ ಬ್ಯಾಗ್ ತೆರೆದ. ಅಲ್ಲಿತ್ತು ಕಿಂಗ್ ಫಿಶರ್ ನ ಕ್ಯಾಲೆಂಡರ್. “ಬಾರೇ ಇಲ್ಲಿ, ” ಅಂತ ಹೆಂಡತಿಯನ್ನು ಕರೆದು ಅರೆ ಬೆತ್ತಲು ಹೆಣ್ಣುಗಳ ಚಿತ್ರ ತೋರಿಸಿ ನಕ್ಕ. “ಇದನ್ನು ಇಲ್ಲಿ ಹಾಲಿನಲ್ಲಿ ಹಾಕೋಣ” ಅಂದಾಗ ಹೆಂಡತಿಗೆ ಸಿಟ್ಟು ಬಂತು.

 

“ನಿಮಗೆ ಏನು ಹೇಳಬೇಕು? ಇಂತಹ ಚಿತ್ರ ಮನೆಯಲ್ಲಿ ಇಡುತ್ತಾರೆಯೇ? ನಿಮಗೆ ಹೆಣ್ಣಿನ ಹುಚ್ಚು. ಬನ್ನಿ ಊಟ ಮಾಡಿ. ನೀವು  ಕುಡಿದದ್ದು ಹೆಚ್ಚಾಯಿತು.”

“ನಾನು ಕುಡಿದದ್ದು ಹೆಚ್ಚಾಯಿತು, ಕಡಿಮೆಯಾಯಿತು ಅನ್ನಲು ನೀನ್ಯಾರೇ”

ಮಾತಿಗೆ ಮಾತು ಬೆಳೆಯಿತು. ಆತ ಹೆಂಡತಿಯ ಕೆನ್ನೆಗೆ ಹೊಡೆದ. ಆಕೆ ಆತನನ್ನು ದೂಡಿದಳು. ಆತ ಆಕೆಗೆ ಪುನಹ ಹೊಡೆದ.

 

ಆತನ ಮುದಿ ತಾಯಿ ಎದ್ದು ಹೊರ ಬಂತು. “ಏನೋ ಇದು, ಯಾರಾದರೂ ಹೆಂಡತಿಗೆ ಹೊಡೆಯುತ್ತಾರೋ? ನಾಳೆ ಹಬ್ಬ ಬೇರೆ.

“ನಾನೂ ನಿನ್ನ ಅಪ್ಪನೂ ಎಷ್ಟು ವರ್ಷ ಒಟ್ಟಿಗೆ ಇದ್ದೆವು, ಅವರು ಒಮ್ಮೆಯಾದರೂ ನನ್ನ ಮೈ ಮೇಲೆ ಕೈ ಮಾಡಿದ್ದರಾ…” ಅನ್ನುತ್ತಾ ಆಕೆ ಗಂಡ ಹೆಂಡರ ನಡುವೆ ಮಧ್ಯ ಬಂದು ನಿಂತಳು.

 

“ಇದು ಗಂಡ  ಹೆಂಡಿರ ಜಗಳ. ನೀ ಮಧ್ಯ ಬರಬೇಡ, ಅಮ್ಮ.” ಎಂದು ತಾಯಿಯನ್ನು ಬದಿಗೆ ತಳ್ಳಿದ.  ಮುದುಕಿ ಆಯ ತಪ್ಪಿ ಕೆಳಗೆ ಬಿದ್ದಿತು. ಬೀಳುವಾಗ, ತಲೆಗೆ ಮೇಜಿನ ತುದಿ ತಾಕಿತು. ಆತನ ತಾಯಿಯ ಉಸಿರು ನಿಂತಿತು.

**

 

 

ಸೈತಾನನ ಮುಖದಲ್ಲಿ ಗೆಲುವಿನ ನಗು.

 

13.01.2016

 

 

 

ಬದಲಾವಣೆ!

ಮಿತ್ರರೊಬ್ಬರು ಊರಿಗೆ ಹೋಗಿ ಹಿಂದೆ ಬಂದರು. ಅವರ ಮನೆಯಲ್ಲಿ ಒಬ್ಬಾಕೆ ಕೆಲಸಕ್ಕೆ ಬರುತ್ತಿದ್ದರು. ಆಕೆಯ ಮಗಳ ಮದುವೆ. ಬಡತನ. ಹಣದ ತೊಂದರೆ. ನನ್ನ ಮಿತ್ರರ ತಂದೆ ತಾಯಿಯರು, ಆಕೆಯ ಕೋರಿಕೆಯ ಮೇರೆಗೆ ಮಂಗಳಸೂತ್ರ ಕೊಡಿಸಿದರು. ಇನ್ನೊಂದು ಮನೆಯವರು, ಧಾರೆಯ ಸೀರೆ ಕೊಡಿಸಿದರು.

 

ಮದುವೆ ಬಹಳ ಸಂಭ್ರದಿಂದ ಆಯಿತಂತೆ. ಮದರಂಗಿ (ಹಿಂದಿಯಲ್ಲಿ ಮೆಹಂದಿ ಅನ್ನುತ್ತಾರೆ, ಕನ್ನಡದ ಶಬ್ದ ಹೊಳೆಯುತ್ತಿಲ್ಲ) ಕಾರ್ಯಕ್ರಮ ಸಹ ಬಹು ಜೋರಾಗಿಯೇ ಆಯಿತಂತೆ. ದೊಡ್ಡ ಚಪ್ಪರ ಹಾಕಿ, ಸಂಗೀತ, ನೃತ್ಯ, ಕುಡಿಯಲು “ಡ್ರಿಂಕ್ಸ್”. ಬಹಳಷ್ಟು ಜನರು ಬಂದಿದ್ದರಂತೆ.

 

*

 

ನಾವು ಚಿಕ್ಕವರಿರುವಾಗ, ನಮ್ಮಲ್ಲಿ ಹೆಚ್ಚು ಬಟ್ಟೆಗಳಿರಲಿಲ್ಲ. ಶಾಲೆಗೆ ಹೋಗುವ, ಮನೆಯಲ್ಲಿ ಹಾಕುವ, ಸಭೆ ಸಮಾರಂಭಗಳಿಗೆ ಹೋಗುವ ಎಂದು ಬಟ್ಟೆಗಳನ್ನು ವಿಂಗಡಿಸಿ ಲೆಕ್ಕ ಹಾಕಿದರೆ, ಒಂದು ಕೈಯ ಬೆರಳುಗಳೂ ಹೆಚ್ಚಾಗಬಹುದು. ಈಗಿನ ಹುಡುಗರಂತೆ ಇಪ್ಪತ್ತೈದು ಐವತ್ತು ಇರಲಿಲ್ಲ. ಮನೆಯಲ್ಲಿ ಉಣ್ಣಲು, ತಿನ್ನಲು ಕಡಿಮೆ ಇರದಿದ್ದರೂ, ಕೈಯಲ್ಲಿ ಹಣದ ಚಲಾವಣೆ ಇರಲಿಲ್ಲ. ಪರ ಊರಿನಿಂದ ಬಂದ ನೆಂಟರಿಷ್ಟರು ಮಕ್ಕಳ ಕೈಯಲ್ಲಿ ಒಂದೋ, ಹತ್ತೋ ರುಪಾಯಿ ಕೊಟ್ಟರೆ, ಅದು ಅಮ್ಮನ ಕೈ ಸೇರುತಿತ್ತು.

 

 

ಶಾಲೆಯಲ್ಲಿ ನಮಗೆ ಈಗಿನಂತೆ, ಊಟ, ಬಟ್ಟೆ, ಪುಸ್ತಕಗಳು ಉಚಿತವಾಗಿ ದೊರೆಯುತ್ತಿರಲಿಲ್ಲ. ಆದರೆ ನಮ್ಮ ತಂದೆ ತಾಯಿಯರು ನಮಗೆ ಪುಸ್ತಕ ಕೊಳ್ಳಲು ಎಂದೂ ಹಿಂಜರಿಯಲಿಲ್ಲ. ನನಗೆ ನೆನಪಿರುವಂತೆ, ನಮ್ಮ ಶಾಲೆಗಳಲ್ಲಿ ಎಲ್ಲಾ ಹುಡುಗರ ಕೈಯಲ್ಲೂ ಪುಸ್ತಕವಿರುತ್ತಿತ್ತು- ಇದಕ್ಕೆ ಬಡವ, ಬಲ್ಲಿದ ಅನ್ನುವ ಭೇದವಿರಲಿಲ್ಲ. ನಾವ್ಯಾರೂ ಖಾಕಿ ಬಣ್ಣದ ಬೈಂಡ್ ಹಾಕುತ್ತಿರಲಿಲ್ಲ. ಕ್ಯಾಲೆಂಡರ್ ಇಲ್ಲವೇ ಹಳೆಯ “ನವಭಾರತ” ಪತ್ರಿಕೆಯ ಹಾಳೆಗಳು ನಮ್ಮ ಪುಸ್ತಕಗಳಿಗೆ ಸುಂದರ ಹೊರ ಕವಚ.

 

 

ನಾವು ಪ್ರವಾಸಕ್ಕೆ ಹೋದ ನೆನಪಿಲ್ಲ. ಐದನೆಯ ತರಗತಿಯಲ್ಲಿ ಎರಡು ಮೂರು ಸಲ ಹೋದ ನೆನಪು – ಅದೂ ಹತ್ತಿರದ ಸ್ಥಳಗಳಿಗೆ. ಕೆಲವೊಂದು ಕಾಲ್ನಡಿಗೆಯಲ್ಲಿ ಹೋದ ಪ್ರವಾಸ. ಒಂಬತ್ತನೆಯ ತರಗತಿಯಲ್ಲಿರುವಾಗ, ಮೈಸೂರು ಪ್ರವಾಸ ರದ್ದಾಗಿತ್ತು – ಯಾರೂ ಹಣ ಕೊಡಲಿಲ್ಲ. ಕೆಲವರದ್ದು ಬಾಯಿ ಮಾತಿನ ಭರವಸೆ ಮಾತ್ರ, ಹಣ ಕೊಡುತ್ತೇವೆಂದು. ಆದರೆ, ನಮ್ಮ ಮಾಸ್ತರರೊಬ್ಬರು ಮಾಡಿದ ತಮ್ಮ ಹಿಂದಿನ ಪ್ರವಾಸದ ವರ್ಣನೆ (ಶ್ರೀಯುತ ಕಾ.ವಾ. ಆಚಾರ್ಯರು) ಸ್ವಲ್ಪ ಮಟ್ಟಿಗೆ  ಇನ್ನೂ ನೆನಪಿದೆ.

 

ನಮಗೆಲ್ಲಾ ಮಾಸ್ತರರ ಭಯವಿತ್ತು, ಅವರ ಬಗೆಗೆ ಗೌರವ ಇತ್ತು. ಅವರಿಗೂ ಅಷ್ಟೇ, ನಮಗೆ ಶಿಕ್ಷೆ ಕೊಡುತ್ತಿದ್ದರೂ ನಮ್ಮ ಮೇಲೆ ಪ್ರೀತಿ ಇತ್ತು. ನಮ್ಮ ಭವಿಷ್ಯದ ಕಾಳಜಿ ಇತ್ತು.

 

*

ಈವಾಗ ಕಾಲ ಬದಲಾಗಿದೆ. ಸರಕಾರೀ ಶಾಲೆಗಳಲ್ಲಿ ಉಚಿತ ಊಟ, ಬಟ್ಟೆ, ಪುಸ್ತಕ ಕೊಡುತ್ತಾರೆ. (ಆದರೂ ಅಲ್ಲಿ ಮಕ್ಕಳಿಲ್ಲ). ಕೆಲವು ಶಾಲಾ ಶಿಕ್ಷಕರಿಗೆ ಮಕ್ಕಳಿಗಾಗಿ ಹೆಚ್ಚಿನ ಪುಸ್ತಕ ಬೇಕೆನಿಸಿದರೆ ಪಾಲಕರು ಉತ್ಸಾಹ ತೋರಿಸುತ್ತಿಲ್ಲ. (ಅಪವಾದ ಹೊರತು ಪಡಿಸಿ). ಸರಕಾರವೇ ಎಲ್ಲಾ ಕೊಡಿಸಲಿ ಅನ್ನುವ ದೋರಣೆ ಇರಬಹುದು. ಮಕ್ಕಳು ಓದಿದ್ದಾರೋ ಇಲ್ಲವೋ ಎಂದು ಪರೀಕ್ಷಿಸುವುದಿಲ್ಲ.

 

ಒಪ್ಪುತ್ತೇನೆ. ಬಡತನ. ಅಶಿಕ್ಷಿತರು ಇ.

 

ಆದರೆ ಒಂಬೈನೂರು, ಸಾವಿರ ಕೊಟ್ಟು ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸುತ್ತಾರೆ!

 

ಈಗಿನ ಸಮಯದಲ್ಲಿ ತಿಂಗಳಿಗೆ ಹತ್ತು ಸಾವಿರ ರುಪಾಯಿ ಸಂಪಾದಿಸುವವನು ಸಹ ಬಡತನ ರೇಖೆಯಿಂದ ಕೆಳಕ್ಕೆ ಇರುತ್ತಾನೆ. ಅಂತಹವರು ನಮ್ಮ ಮಧ್ಯದಲ್ಲಿ ಬಹಳಷ್ಟು ಇದ್ದಾರೆ. ಅವರು ತಮ್ಮ ಮಕ್ಕಳನ್ನು ತಮ್ಮ ಸಂಪಾದನೆಯ ೧೦% ಕ್ಕೂ ಹೆಚ್ಚಿನ ಹಣ ತೆತ್ತು ಪ್ರವಾಸಕ್ಕೆ ಕಳುಹಿಸುತ್ತಾರೆ. ಮಕ್ಕಳ ಹಟವೇ, ತಾನು ಕಾಣದ ಊರನ್ನು ತನ್ನ ಮಕ್ಕಳು ಕಾಣಲಿ ಅನ್ನುವ ಆಶೆಯೇ ಅಥವಾ ತಾವು ಕೊಡುವ ಪ್ರಾಮುಖ್ಯತೆಯ ಬದಲಾವಣೆಯೇ(Change in priority)  ಎಂದು ಅರ್ಥವಾಗುವುದಿಲ್ಲ.

 

(ಮೆಹಂದಿ ಕಾರ್ಯಕ್ರಮದ ಬಗ್ಗೆ ಉಲ್ಲೇಖಿಸಿದ್ದ ಕಾರಣ ಈಗ ನಿಮಗೆ ಅರ್ಥವಾಗಿರಬಹುದು)

 

ಈ ಲೇಖನವನ್ನು ಉದ್ದೇಶ ಪೂರ್ವಕವಾಗಿಯೇ ಅಪೂರ್ಣ ಗೊಳಿಸಿದ್ದೇನೆ.

 

05.01.2016

ನಾಳೆ

ರವಿವಾರ. ಇಂದು ಗಡ್ಡ ತೆಗೆಯುವುದು ಬೇಡ. ನಾಳೆ ತೆಗೆದರಾಯಿತು. ಸ್ನಾನ ಮಾಡಿ ಹೊರ ಬರುತ್ತೇನೆ.

 

ದೇವರ ಮುಂದೆ ದೀಪ ಹಚ್ಚುತ್ತಾ, ” ವಕ್ರ ತುಂಡ ಮಹಾ ಕಾಯ… (ನಿನ್ನೆ ಶೂ ರಿಪೇರಿ ಮಾಡಿಸಬೇಕಿತ್ತು. ಇವತ್ತು ಆ ಮೋಚಿಗೆ ರಜಾ. ನಾಳೆ ಮರೆಯಬಾರದು)… ಸರ್ವ ಕಾರ್ಯೇಷು ಸರ್ವದಾ”

 

ಸೋಫ಼ಾದ ಮೇಲೆ ಕುಳಿತು ಏನೇನು ಕೆಲಸ ಮಾಡಲಿದೆ ಎಂದು ಸ್ವಲ್ಪ ಯೋಚಿಸುತ್ತೇನೆ:

 

ಡಿ ಮಾರ್ಟ್ ಗೆ ಹೋಗಿ ತಿಂಗಳ ಸಾಮಾನು ತರಬೇಕು. ಇವತ್ತು ರವಿವಾರ. ತುಂಬಾ ಗದ್ದಲವಿರುತ್ತದೆ. ನಾಳೆ ಸಾಯಂಕಾಲ ಹೋದರಾಯಿತು.

 

ಮುಂದಿನ ಶುಕ್ರವಾರ ನಮ್ಮ ಮದುವೆಯ ದಿನ. ಮಗಳು ಮುಂಬಾಯಿಯಿಂದ ಹಣ ಕಳುಹಿಸಿದ್ದಾಳೆ. ಎಷ್ಟೆಂದು ಹೇಳಿಲ್ಲ. ನಾಳೆ ಬ್ಯಾಂಕಿಗೆ ಹೋಗಿ ನೋಡಬೇಕು.

 

ಪಕ್ಕದ ಮನೆಯ ಮಹಡಿಯ ಮೇಲಿರುವವರ ಮಗುವಿನ ಹುಟ್ಟು ಹಬ್ಬ. ಬರಲು ಹೇಳಿದ್ದಾರೆ. ಏನಾದರೂ ಗಿಫ಼್ಟ್ ಕೊಡಬೇಕು. ಹಣ ಕೊಡುವುದೇ ಒಳಿತು. ಅವರಿಗೆ ಸಹಾಯವಾದೀತು. ಮಗು ಆಟದ ವಸ್ತುವನ್ನು ಎರಡು ದಿನದಲ್ಲಿ ಪುಡಿ ಪುಡಿ ಮಾಡುತ್ತದೆ.

ಇವತ್ತು ಆ ಮನೆಯಲ್ಲಿ ತುಂಬಾ ಜನರಿರುತ್ತಾರೆ. “ಏನು ಮಾಡುತ್ತೀರಿ?” ಎಂದು ಕೇಳುತ್ತಾರೆ. “ನಿವೃತ್ತಿಯಾಗಿದ್ದೇನೆ” ಅಂದರೆ ನನ್ನ ಹೆಂಡತಿಗೆ ಸಿಟ್ಟು. “ಹಾಗೆ ಹೇಳಲು ನಾಚಿಗೆಯಾಗುವುದಿಲ್ಲವೇ? ಪಾರ್ಟ್ ಟಾಯಿಂ ಕೆಲಸ ಮಾಡುತ್ತೇನೆ?ಅನ್ನಿ.” ನನಗೆ ಸುಳ್ಳು ಹೇಳಲು ಮುಜುಗುರ, ಹಾಗಾಗಿ  ನಾಳೆನೇ ಅಲ್ಲಿಗೆ ಹೋದರಾಯಿತು.

 

ಪ್ರತೀ ಕೆಲಸವನ್ನು ಉದಾಸೀನತೆಯಿಂದ ನಾಳೆಗೆ ತಳ್ಳುತ್ತಿದ್ದೇನೆ. ಮೊದಲಿನಿಂದಲೂ ಬೆಳೆಸಿಕೊಂಡು  ಬಂದ ಅಭ್ಯಾಸ. ಮಹಾಭಾರತದಲ್ಲಿ ಧರ್ಮರಾಯ, “ನಾಳೆ” ಅಂದಾಗ, ಭೀಮ, “ನನ್ನ ಅಣ್ಣ ಕಾಲನನ್ನು ಗೆದ್ದ” ಎಂದು ಹೇಳುತ್ತಾ   ವಿಜಯ ಸೂಚಕದ ನಗಾರಿ ಭಾರಿಸಿದ್ದನಂತೆ.

 

ನಾಳೆ ಅನ್ನುವುದೇ ಇಲ್ಲದಿದ್ದರೆ……, ನಗು ಬರುತ್ತದೆ.

 

“ಮಧ್ಯಾಹ್ನದ ಊಟಕ್ಕೆ ಕೋಳಿ ಬೇಕು.” ಹೆಂಡತಿಯ ರಿಮೈಂಡರ್. ಇದನ್ನು ನಾಳೆಗೆ ತಳ್ಳುವಂತಿಲ್ಲ.

 

*

 

ಸಾಯಂಕಾಲ ಹೆಂಡತಿಯ ಸೋದರ ಮಾವ ಬರುತ್ತಾರೆ. ಬಹಳ ತಮಾಶೆಯ ವ್ಯಕ್ತಿ. ಹೊಟ್ಟೆಗೆ ಸ್ವಲ್ಪ ಬಿಸಿ ಬಿದ್ದರೆ, ಇನ್ನೂ ಹೆಚ್ಚಿನ ತಮಾಶೆಯ ಮಾತುಗಳು. ಮಾತಿನ ಮಧ್ಯೆ ಕಿಸೆಯಿಂದ ಬಾಟಲಿ ಹೊರ ತೆಗೆಯುತ್ತಾರೆ. ನಾನು ಹೊರ ಹೋಗುವುದು ಉಳಿಯಿತು.

 

ಊಟದ ನಂತರ ಮಾವನನ್ನು ಕಾರಿನಲ್ಲಿ ಅವರ ಮನೆಗೆ ಬಿಟ್ಟು ಬರಲು ಮಗನಿಗೆ ಹೇಳುತ್ತೇನೆ.ಅವರು ಹೇಳಿದ ಒಂದು ಮಾತು ಎಷ್ಟೊಂದು ನಿಜ, ” ರಿಟಾಯರ್ ಆದ ನಂತರ ಕೆಲವು ಗೆಳೆಯರು  ಫೋನ್ ಸಹ ಎತ್ತುವುದಿಲ್ಲ, ಎಲ್ಲಿ ಹಣ ಕೇಳುತ್ತೇವೋ ಅನ್ನುವ ಭಯ ಅವರಿಗೆ.”

 

 

ಮಲಗುವಾಗ ಯಾಕೋ ಹೆಚ್ಚಿನ ಬಾಯಾರಿಕೆ . ನೀರು ಕುಡಿದಷ್ಟೂ ಸಾಕಾಗುವುದಿಲ್ಲ.

*

ದಿನಾ ಬೆಳಿಗ್ಗೆ ನಮ್ಮೆಲ್ಲರಿಗಿಂತ ಬೇಗನೆ ಏಳುವ ಅಪ್ಪ ಇನ್ನೂ ಎದ್ದಿಲ್ಲ. ನಿನ್ನೆ ಅಜ್ಜನೊಂದಿಗೆ ಕುಡಿದದ್ದು ಹೆಚ್ಚಾಯಿತೋ ಏನೋ. ಚಹಾ ತಯಾರಿದೆ. ಅಮ್ಮ ಕೊಟ್ಟ ಚಹಾ ಅವರಿಗೆ ಕೊಡಲು, ಅವರು ಮಲಗುವ ಕೋಣೆಗೆ ಹೋಗುತ್ತೇನೆ. ಅವರು ಕುಡಿಯುವುದು ಅಪರೂಪ. ಕುಡಿದಾಗೆಲ್ಲಾ ಅವರು ಒಬ್ಬರೇ ಬೇರೆಯೇ ಕೋಣೆಯಲ್ಲಿ ಮಲಗುವುದು.

 

ಅವರು ಉಟ್ಟ ಪಂಚೆ ಒದ್ದೆಯಾಗಿದೆ. ರಾತ್ರಿ ಆಗಾಗ ನೀರು ಕುಡಿಯುತ್ತಿದ್ದರು. ಕುಡಿದದ್ದು ಹೆಚ್ಚಾಗಿ, ಮಲಗಿದ್ದಲ್ಲೇ ಮೂತ್ರ ಮಾಡಿದ್ದಾರೆ. ಹೆಚ್ಚು ಕುಡಿಯ ಬೇಡಿ ಅಂದರೆ ಕೇಳುವುದಿಲ್ಲ.

 

“ಪಪ್ಪಾ..ಪಪ್ಪಾ…” ಕರೆಯುತ್ತೇನೆ. ಉತ್ತರಿಸುವುದಿಲ್ಲ. ಮೈ ಮುಟ್ಟಿ ಅಲುಗಾಡಿಸಿ ಎಬ್ಬಿಸಲು ಮೈ ಮೇಲೆ ಕೈ ಹಾಕುತ್ತೇನೆ.

 

“ಅಮ್ಮಾ….”

 

ಅಮ್ಮ ಓಡಿ ಬರುವ ಸದ್ದು.

 

 

14.03.2016 to 15.03.2016

 

ಗತ ವೈಭವ

ಈಗ ನಾನಿರುವುದು ಬೆಂಗಳೂರಿನಲ್ಲಾದರೂ, ಹುಟ್ಟಿ ಬೆಳೆದದ್ದು ಮುಂಬಾಯಿಯಲ್ಲಿ. ಮೂಲತಃ ನಾನು ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿಯವನು. ನಮ್ಮದು ಮಾತೃ ಪ್ರಧಾನ ಕುಟುಂಬ ಹಾಗೂ ಬಹಳ ಹೆಸರುವಾಸಿಯಾದ ಮನೆತನ. ಒಂದು ಕಾಲದಲ್ಲಿ, ಇಡೀ ಹಳ್ಳಿಯೇ ನಮ್ಮದಾಗಿತ್ತಂತೆ. ಹಲವು ನೂರು ವರ್ಷಗಳ ಹಿಂದಿನ ಕಥೆ. ಸತ್ಯಾಸತ್ಯತೆಯನ್ನು ನಾವು ಯಾರೂ ಪರೀಕ್ಷಿಸಿಲ್ಲ. ಕೆಲವೊಮ್ಮೆ ಇಂತಹ ಕಥೆಗಳಿಂದ ನಾವು ಒಂದು ರೀತಿಯ ತೃಪ್ತಿ ಪಡೆಯುತ್ತೇವೆ, ಹೆಮ್ಮೆ ಅನುಭವಿಸುತ್ತೇವೆ.

.

ಮುಖ್ಯ ಕಥೆ ಹೇಳುವ ಮುನ್ನ ನಿಮಗೆ ನಮ್ಮ ಹಿರಿಯರ ಬಗ್ಗೆ ಕಿರು ಪರಿಚಯ ಮಾಡುತ್ತೇನೆ.

ನನ್ನ ಅಜ್ಜಿಯ ತಾಯಿ (ನನ್ನ ಮುತ್ತಜ್ಜಿ). ತನ್ನ ತಾಯಿಗೆ ಒಬ್ಬಳೇ ಮಗಳು. ಅವರ ಜೊತೆ ಏಳು ಗಂಡು ಮಕ್ಕಳು. ಆಕೆ ಕೊನೆಯವಳು. ಒಂದೇ ಹೆಣ್ಣು, ಹಾಗಾಗಿ  ಆಸ್ತಿ ಎಲ್ಲಾ ಆಕೆಯ ಪಾಲಾಯಿತು. ನನ್ನ ಅಜ್ಜಿಗೆ ನಾಲ್ಕು ಹೆಣ್ಣು ಮತ್ತು ಎರಡು ಗಂಡು ಮಕ್ಕಳು. ಅದರಲ್ಲಿ ನನ್ನ ಅಮ್ಮ ಹಿರಿಯಾಕೆ.

ನನ್ನ ಅಜ್ಜಿಗೆ ಏಳು ಮಾವಂದಿರು ಎಂದು ಮೊದಲೇ ಹೇಳಿದ್ದೆ. ಅದರಲ್ಲಿ ಮೂರು ಮಾವಂದಿರು ಎಳೆಯ ವಯಸ್ಸಿನಲ್ಲೇ ಯಾವುದೋ ಕಾಯಿಲೆಗೆ ತುತ್ತಾಗಿ ಸತ್ತಿದ್ದರು. ಒಬ್ಬ ಮಾವನ ಗುಣ ನಡತೆ ಸರಿ ಇರಲಿಲ್ಲ. ಆತ ಮನೆಗೆ ಕೆಟ್ಟ ಹೆಸರು ತರುತ್ತಾನೆಂದು, ಆತನನ್ನು ಮನೆಯಿಂದ ಹೊರ ಹಾಕಿದ್ದರು. ಅಜ್ಜಿಯ ದೊಡ್ಡ ಮಾವ ಯಜಮಾನಿಕೆ ವಹಿಸಿ ಕೊಂಡಿದ್ದರು. ಅವರ ಹೆಸರು ಸುಬ್ಬಯ್ಯ ಎಂದು. ತುಂಬಾ ಹೆಸರುವಾಸಿಯಾದ ವ್ಯಕ್ತಿ. ಈಗಲೂ ಕೆಲವು ಹಳಬರು, ಅವರ ಕಥೆ ಹೇಳುತ್ತಾರೆ. ದಾನ ಧರ್ಮದಲ್ಲಿ ಹೆಸರುವಾಸಿಯಾದ ವ್ಯಕ್ತಿ. ಊರ ಪಂಚಾಯಿತಿಕೆಯಲ್ಲೂ ತಮ್ಮ ನಿಷ್ಪಕ್ಷಪಾತದ ತೀರ್ಪಿಗೆ ಹೆಸರುವಾಸಿಯಾಗಿದ್ದರು. ಊರ ಶಾಲೆಗೆ ತುಂಬಾ ಸಹಾಯ ಮಾಡಿದ ವ್ಯಕ್ತಿ. ತುಂಬಾ ಕಟ್ಟು ನಿಟ್ಟಿನ ವ್ಯಕ್ತಿ ಎಂದು ಅಮ್ಮ ಹೇಳುತ್ತಿದ್ದರು.

ಈಗ ನಮ್ಮ ಕುಟುಂಬದವರ ಕೈಯಲ್ಲಿ ಸ್ವಲ್ಪವೂ ಆಸ್ತಿ ಇಲ್ಲ. ಪ್ರತಿಯೊಬ್ಬರೂ ಹಣ ಮಾಡಲು ಮುಂಬಾಯಿಗೆ ಹೋದರು. ತಮ್ಮ ಜಮೀನನ್ನು ನೋಡಿಕೊಳ್ಳಲು ಗೇಣಿಗೆ ಕೊಟ್ಟು ಪರ ಊರು ಸೇರಿದರು. ವರುಷಕ್ಕೊಮ್ಮೆ ಊರಿಗೆ ಬಂದು ಗೇಣಿ ವಸೂಲಿ ಮಾಡಿ, ಮಜಾ ಮಾಡಿ ಹಿಂದೆ ಹೋಗುತ್ತಿದ್ದರು.

ದೇವರಾಜ ಅರಸರ ಕಾಲದಲ್ಲಿ ಬಂದ, ಉಳುವವನೇ ಭೂಮಿಯ ಒಡೆಯ ಅನ್ನುವ ಕಾಯಿದೆಯಿಂದ ಇಂತಹ ಭೂಮಿ ಎಲ್ಲಾ ಒಕ್ಕಲುಗಳ ಪಾಲಾಯಿತು. ಆದರೆ, ನಮ್ಮ ಹಳೆಯ ಮನೆ ಮತ್ತು ಒಂದು ಸಣ್ಣ ತೋಟ ಮಾತ್ರ ಇನ್ನೂ ಇದೆ. ಯಾರೂ ನೋಡಿಕೊಳ್ಳುವವರಿಲ್ಲದೆ ಅವೆಲ್ಲಾ ಪಾಳು ಬಿದ್ದಿವೆ. ನಮ್ಮ ಮನೆಗೆ ಕಡಿಮೆ ಎಂದರೂ ಇನ್ನೂರು ವರ್ಷವಾಗಿರ ಬಹುದು. ಭಯದಿಂದಲೋ, ಭಕ್ತಿಯಿಂದಲೋ ಯಾರೂ ಅದನ್ನು ವಶ ಪಡಿಸಿಕೊಳ್ಳಲಿಲ್ಲ.

*

ನನ್ನ ಮಕ್ಕಳಿಗೆ ನಮ್ಮ ಹಳ್ಳಿ ಮತ್ತು ನಮ್ಮ ಮನೆ ನೋಡ ಬೇಕೆನ್ನುವ ಆಶೆ. ಸ್ವಲ್ಪ ಸ್ವಲ್ಪ ಅದರ ಕಥೆ  ನನ್ನ  ಬಾಯಿಯಿಂದ ಕೇಳಿದ ಮೇಲೆ, ಅವರಿಗೆ ಅದನ್ನು ಕಾಣುವ ತವಕ. ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗುವ ಮುನ್ನ ನಾನು ಅಲ್ಲಿಗೆ ಹೋಗಿ, ಅಲ್ಲಿನ ಪರಿಸ್ಥಿತಿ ತಿಳಿದು ಕೊಳ್ಳುವುದು ಅವಶ್ಯ ಅನಿಸಿತು.

ಊರಿಗೆ ಬಂದಿದ್ದೇನೆ. ಯಾರ ಪರಿಚಯವೂ ಇಲ್ಲ. ದಾರಿಯೂ ಗೊತ್ತಿಲ್ಲ. ಮನೆತನದ ಹೆಸರು ಹೇಳಿ  ಮನೆ ಹುಡುಕಿದೆ. ಪಾಳು ಬಿದ್ದ ತೆಂಗಿನ ತೋಟದ ಮಧ್ಯ ಹಳೆಯ ಮನೆ. ತೋಟದಲ್ಲಿ ಅಲ್ಲಲ್ಲಿ ಬಿದ್ದ ತೆಂಗಿನ ಒಣ ಗರಿ. ನಾಚಿಗೆ ಮುಳ್ಳು. ಎತ್ತರಕ್ಕೆ ಬೆಳೆದ ಹುಲ್ಲು, ಪೊದೆಗಳು. ಭೂತದ ಚಲನ ಚಿತ್ರ ತೆಗೆಯಲು ಸರಿಯಾದ ಜಾಗ.

ತಲೆಗೆ ಒಂದು ವಿಚಿತ್ರ ರೀತಿಯ ಟೊಪ್ಪಿ ಇಟ್ಟ ಹೆಂಗಸೊಬ್ಬಳು, ನನ್ನನ್ನು ದೂರದಿಂದ ಕಂಡು ಹತ್ತಿರ ಬಂದು, “ಓಲಾಂಡ್?” ಅನ್ನುತ್ತಾಳೆ.

ನನ್ನ ಅಮ್ಮನ ಮತ್ತು ಅಜ್ಜಿಯ ಹೆಸರು ಹೇಳಿದೆ. ಅವರ ಹೆಸರು ಕೇಳಿದ್ದೇನೆ, ನೋಡಿಲ್ಲ, ಈಗ ಬರುತ್ತೇನೆ ಅನ್ನುತ್ತಾ ಆಕೆ ಹೋದಳು. ಸ್ವಲ್ಪ ಸಮಯದ ನಂತರ ಜೊತೆಗೆ ಆಕೆ ತನ್ನ ತಾಯಿಯನ್ನು ಕರೆದು ಕೊಂಡು ಬರುತ್ತಾಳೆ. ಆ ಮುದುಕಿಗೆ ನಾನು ನಮಸ್ಕರಿಸುತ್ತೆನೆ. “ ಹೋ, ನೀವು ನಮಗೆ ನಮಸ್ಕರಿಸ ಬಾರದು. ನೀವು ನಮ್ಮ ಧಣಿಗಳು” ಅನ್ನುತ್ತಾಳೆ. ಆಕೆಯ ಮಗಳು ಒಂದು ಗಾಜಿನ ಲೋಟದಲ್ಲಿ ತಂಪು ಪಾನೀಯ ತರುತ್ತಾಳೆ. ಕುಡಿಯುತ್ತೇನೆ. ಏನೋ ನೆನೆದು ನಗು ಬರುತ್ತದೆ.

“ಯಾಕೆ ನಗುತ್ತೀರಿ?”

“ಅಮ್ಮ , ಊರಲ್ಲಿ ಯಾರಾದರೂ ಮನೆಗೆ ಬಂದರೆ ಮೊದಲು ಬೆಲ್ಲ ನೀರು ಕೊಡುತ್ತಾರೆ ಅಂದಿದ್ದರು.”

“ಈಗ ಅದೆಲ್ಲಾ ಮರೆತು ಹೋಗಿದೆ. ಕಾಲಕ್ಕೆ ತಕ್ಕ ಹಾಗೆ ಕೋಲ. ಕಾಲ ಬದಲಾದ ಹಾಗೆ ನಾವೂ ಬದಲಾಗಬೇಕಲ್ಲವೇ? ಈಗ ಓಲೆ ಬೆಲ್ಲ, ನೀರ್ ಬೆಲ್ಲ ಸಹ ಸಿಗಲು ಕಷ್ಟ ಇದೆ.”

ಅವರಿಬ್ಬರ ಜೊತೆಗೆ, ನಮ್ಮ ಹಳೆಯ ಮನೆಗೆ ಬರುತ್ತೇನೆ. ಅಲ್ಲಲ್ಲಿ ಗೋಡೆ ಬಿದ್ದಿದೆ. ದಪ್ಪ ದಪ್ಪದ ಕಂಬಗಳು. ಕೆತ್ತನೆಯ ಮರದ ದಪ್ಪದ ಬಾಗಿಲು. ದೂಳು ತುಂಬಿದ ಕೆಂಪು ಬಣ್ಣದ ನೆಲ. ತಾಯಿ, ತಾನು ತಂದಿದ್ದ ಬೈರಾಸಿನಿಂದ  ಜಗಲಿಯ ನೆಲ ಒರೆಸುತ್ತಾಳೆ..ನಾನಲ್ಲಿ ಕುಳಿತುಕೊಂಡೆ.

ತಾಯಿಯ ಹೆಸರು ನರ್ಸಿ. ನರ್ಸಿಗೆ ನನ್ನ ಅಮ್ಮ ಮತ್ತು ಅಜ್ಜಿಯ ಪರಿಚಯವಿತ್ತು. ನನ್ನ ಮುತ್ತಜ್ಜನ ಹೆಸರು, ಕಾರುಭಾರು ಕೇಳಿ ತಿಳಿದುಕೊಂಡಿದ್ದಾಳೆ. ನಮ್ಮ ಮನೆತನದ ಗತ ವೈಭವ ನನ್ನಲ್ಲಿ ಹೇಳಿದಳು.  ಮಗಳ ಬಳಿ ಹೇಳಿ ನನಗೆ  ಬೊಂಡ (ಎಳನೀರು), ಬಾಳೆ ಹಣ್ಣು ತರಿಸಿದಳು. ಮಗಳ ಕೈಯಲ್ಲಿ, ಒಂದು ಕೋಣೆಯನ್ನು ಸ್ವಚ್ಛ ಗೊಳಿಸಿದಳು. ಸಾಯಂಕಾಲವಾದುದರಿಂದ ಇಲ್ಲೇ ನಿಲ್ಲಿ. ರಾತ್ರಿ ಹೆದರಿಕೆಗೆ ಅಳಿಯನನ್ನು ಕಳುಹಿಸುತ್ತೇನೆಂದು ಹೇಳಿದಳು. ಅದನ್ನು ನಾನು ನಿರಾಕರಿಸಿದೆ. ಮನೆಯಲ್ಲಿದ್ದ ಒಂದು ಹಳೇ ಕಾಲದ ಲಾಂಟಾನಿನ ಗಾಜನ್ನು ಸ್ವಚ್ಚ ಗೊಳಿಸಿದಳು. ಅದರಲ್ಲಿ ಚಿಮಣಿ ಎಣ್ಣೆ ಮತ್ತು ಬತ್ತಿ ಇತ್ತು. ತನ್ನ ಮನೆಯಿಂದ ಕಡ್ಡಿ ಪೆಟ್ಟಿಗೆ ತರಿಸಿದಳು. ಹೋಟೇಲಿನಿಂದ ನಿಮಗೆ ಊಟ ತರಿಸುತ್ತೇನೆ ಎಂದೆಲ್ಲಾ ಉಪಚಾರ ಮಾಡಿದಳು.

“ನಮ್ಮ ಮನೆಗೆ ಬನ್ನಿ. ಬೇಸರ ಕಳೆಯಲು ಟೀ ವಿ ನೋಡ ಬಹುದು.”

ನಮ್ಮ ಹಳ್ಳಿ ಈಗ ಆಧುನಿಕಗೊಂಡಿದೆ. ಚಿಕ್ಕ ಗುಡಿಸಲು ಕಾಣುವುದಿಲ್ಲ. ಬರೇ ತಾರಸಿಯ ಮನೆಗಳು. ನಾನು ಚಿಕ್ಕವನಿದ್ದಾಗ, ಮುಲಿಯ (ಒಂದು ಬಗೆಯ ಹುಲ್ಲು) ಗುಡಿಸಲು ಕಂಡಿದ್ದೆ. ಈಗ ಅಲ್ಲಲ್ಲಿ ಕೇಬಲ್ ಡಿಶ್ ಕಾಣುತ್ತದೆ. ಪ್ರಾಯಶಃ ಪ್ರತೀ ಮನೆಯಲ್ಲೂ ಟೀ ವಿ ಇದೆ.  ಮೊಬಾಯಿಲ್ ಇಲ್ಲದವರು ಅಪರೂಪ. ಅಂದು ನಾನು ಬಂದಿದ್ದಾಗ ಎಲ್ಲೆಡೆ ಹಸಿರು. ಆವಾಗ ಸರಿಯಾದ ರಸ್ತೆ ಸಹ ಇರಲಿಲ್ಲ. ನಾವು ಓಣಿಯಲ್ಲಿ ನಡೆದಿದ್ದ ನೆನಪು.

ರಾತ್ರಿ. ಲಾಂಟಾನ್ ಉರಿಯುತ್ತಿದೆ. ಅದರ ಮಂದ ಬೆಳಕು, ಕತ್ತಲು, ನೆರಳು ಸ್ವಲ್ಪ ಭಯ ಹುಟ್ಟಿಸುತ್ತಿತ್ತು. ಹೊತ್ತು ಹೋಗುತ್ತಿಲ್ಲ. ಟೀ ವಿ ಗೆ ನಾವೆಲ್ಲಾ ಎಷ್ಟು ಒಗ್ಗೆ ಹೋಗಿದ್ದೇವೆಂದು ಈಗ ಗೊತ್ತಾಯಿತು. ಚಾಪೆಯ ಮೇಲೆ ಮಲಗಿ ಕೊಂಡರೆ, ಮೈ ಚುಚ್ಚುತ್ತದೆ. ನಿದ್ದೆ ಬರುವುದಿಲ್ಲ.

ರಾತ್ರಿ ಒಮ್ಮೆಲೇ ಎಚ್ಚರವಾಗುತ್ತದೆ.  ಮನೆಯಲ್ಲಿ ಯಾರೋ ನನ್ನ ಜೊತೆಯಲ್ಲಿ ಇದ್ದಾರೆ ಅನ್ನುವ ಬಲವಾದ ಅನಿಸಿಕೆ. ಛೇ, ಹೇಗೆ ಸಾಧ್ಯ, ಇದೆಲ್ಲಾ ಬರೇ ಭ್ರಮೆ. ಹೊರಗೆ ಹೋಗಿ ನೋಡಲೆ, ಬೇಡ ಅನಿಸಿತು.

ಪುನಹ ಎಚ್ಚರ. ಯಾರೋ ಗಂಡಸರು ಕೆಮ್ಮುವ ಸದ್ದು. ಭ್ರಮೆ ಇರಬಹುದೇ…ಪುನಃ ಯಾರೋ ಕೆಮ್ಮುವ ಸದ್ದು. ದೂರದಲ್ಲಿ ನರಿ, ನಾಯಿಗಳ ಊಳಿಡುವಿಕೆ, ಕೀಟಗಳ ಗೆಜ್ಜೆಯ ಸದ್ದಿನ ಮಧ್ಯ ಕೆಮ್ಮಿನ ದನಿ ಕೇಳಿಸುತ್ತದೆ. ಭಯವಾಗುತ್ತದೆ. ಹಾಗೆಯೇ ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡು ಮಲಗುತ್ತೇನೆ. ಕೆಮ್ಮುವ ಸದ್ದು ನಿಲ್ಲುವುದಿಲ್ಲ. ಆದದ್ದಾಗಲಿ ಎಂದು ಏಳುತ್ತೇನೆ. ಲಾಂಟಾನ್ ಹಿಡಿದುಕೊಂಡು ಕೋಣೆಯ ಹೊರ ಬರುತ್ತೇನೆ.

ಚಾವಡಿಯಲ್ಲಿರುವ easy chairನಲ್ಲಿ ಯಾರೋ ಮುದುಕರು ಕುಳಿತು ಕೊಂಡಿದ್ದಾರೆ. ಹಣ್ಣು ಹಣ್ಣು ಮುದುಕ. ಅಂಗಿ ಹಾಕಿಲ್ಲ,  ಬರೇ ಮುಂಡುವಿನಲ್ಲಿದ್ದಾರೆ. ಹತ್ತಿರದಲ್ಲಿ ಒಂದು ಊರುಗೋಲು. ಆಗಾಗ ಕೆಮ್ಮುತ್ತಿದ್ದಾರೆ. ಕಣ್ಣಲ್ಲಿ ನೀರು. ಬೆಳಕು ಕಂಡ ಅವರು, “ಯಾರದು?” ಅನ್ನುತ್ತಾರೆ.

ನನ್ನ ಹೆಸರು ಹೇಳಿದೆ. ನನಗೆ ಇಲ್ಲಿ ಏನು ಕೆಲಸವೆಂದು ಕೇಳಿದರು. ಇದು ನನ್ನ ಮನೆ, ನನ್ನ ಪೂರ್ವಜರ ಮನೆ ಅಂದೆ. ಯಾರ ಮಗ ಎಂದು ಕೇಳಿದರು. ನಾನು ನನ್ನ ಅಜ್ಜಿ ಮತ್ತು ತಾಯಿಯ ಹೆಸರು ಹೇಳಿದೆ. ಅವರು ನಿಟ್ಟುಸಿರು ಬಿಟ್ಟರು. ನಿನಗೊಬ್ಬನಿಗಾದರೂ ಈ ಮನೆಯ ನೆನಪಾಯಿತಲ್ಲ, ಸಾಕು ಅಂದರು.

“ಅಜ್ಜಾ, ನೀವೇಕೆ ಅಳುತ್ತಿದ್ದಿರಿ, ನೀವು ಯಾರು?” ಅಂದೆ.

ಆ ಮುದುಕ ಬೇರಾರೂ ಅಲ್ಲ, ನನ್ನ ಮುತ್ತಜ್ಜ, ಸುಬ್ಬಯ್ಯ!

*

ನನ್ನ ಕಾಲದಲ್ಲಿ ಶಿಸ್ತು ಇತ್ತು. ಜನರಲ್ಲಿ ಭಯ ಭಕ್ತಿ ಇತ್ತು. ನಮ್ಮ ಮನೆ ತುಂಬಾ ಹೆಸರುವಾಸಿಯಾಗಿತ್ತು. ಆ ಮರ್ಯಾದೆಗಾಗಿ ನಾನು ನನ್ನ ವೈಯಕ್ತಿಕ ಬದುಕು ಮತ್ತು  ಸಂತೋಷವನ್ನು ಬಲಿ ಕೊಟ್ಟೆ. ಮನೆತನದ ಗೌರವ ಉಳಿಸಿಕೊಳ್ಳಲು ಬಹಳ ಶ್ರಮ ಪಟ್ಟೆ.

ಬಹಳ ಕಟ್ಟು ನಿಟ್ಟಿನ ಮನುಷ್ಯ ಅನ್ನುವ ಮುಖವಾಡ ಹಾಕಿಕೊಂಡೆ. ಈ ಮುಖವಾಡದ ಮಧ್ಯೆ ನಾನು ಎರಡು ತಪ್ಪು ಮಾಡಿದೆ.

ನಮ್ಮದು ಅಳಿಯಕಟ್ಟು. ನಮ್ಮ ಆಸ್ತಿ ಎಲ್ಲಾ ಹೆಣ್ಣು ಮಕ್ಕಳಿಗೆ ಮತ್ತು ಅವಳ ಹೆಣ್ಣು ಮಕ್ಕಳಿಗೆ ಹೋಗುತ್ತದೆ. ಇದೇ ಪರಂಪರೆಯಲ್ಲಿ ನಾನು ಸಹ ನನ್ನನ್ನು  ನಂಬಿ ಬಂದ ಹೆಂಡತಿ ಮಕ್ಕಳಿಗೆ ಯಾವ  ಆಸ್ತಿಯನ್ನೂ ಮಾಡಲಿಲ್ಲ.  ನನ್ನ ಜೀವನ ಇಡೀ ಸವೆಸಿದ್ದು ತಂಗಿ ಮತ್ತು ಅವಳ ಮಕ್ಕಳಿಗಾಗಿ.

ನನ್ನ ಹೆಂಡತಿ ಸಹ ಒಂದು ಗೌರವಾನಿತ ಕುಟುಂಬದಿಂದ ಬಂದವಳು. ನಮ್ಮ ಮನೆತನದ ಅಂತಸ್ತಿಗೆ ಸರಿಯಾದ ಮನೆತನ. ಆದರೆ, ಅವರ ಹೆಚ್ಚಿನ ಆಸ್ತಿ, ಅವರ ಒಬ್ಬ ಯಜಮಾನನ ತಪ್ಪಿನಿಂದ ಸಂಪೂರ್ಣ ಕೈ ಬಿಟ್ಟು ಹೋಯಿತು.

ನನ್ನ ನಂತರ, ನನ್ನ ಹೆಂಡತಿ ಮಕ್ಕಳೊಂದಿಗೆ ತನ್ನ ತವರು ಸೇರಿದಳು.. ತನ್ನ ಜೊತೆ ನನ್ನ ಹೆಸರು ಮಾತ್ರ ಕೊಂಡು ಹೋದಳು. ನನ್ನ ತಂಗಿಯಾಗಲಿ, ಅವರ ಮಕ್ಕಳಾಗಲಿ ನನ್ನವಳಿಗೆ ಏನೂ ಕೊಡಲಿಲ್ಲ. ಶಾಸ್ತ್ರ ಪ್ರಕಾರ ಒಂದು ಸೀರೆ ಮಾತ್ರ ಕೊಟ್ಟರು. ಅಲ್ಲಿ  ಆಕೆಗೆ ಕಷ್ಟದ ಬಾಳು. ನನ್ನ ಹೆಂಡತಿ ಮತ್ತು ಮಕ್ಕಳು ಹೇಗಿದ್ದಾರೆ ಎಂದು ನನಗೆ ಗೊತ್ತಾಗುತ್ತಿಲ್ಲ. ಈ ಜಾಗದ ವ್ಯಾಮೋಹ ನನ್ನನ್ನು ಇಲ್ಲಿಂದ ಹೊರಗೆ ಹೋಗಲು ಬಿಡುತ್ತಿಲ್ಲ. ಮನೆತನದ ಗೌರವ ಉಳಿಸುವ ನಿಟ್ಟಿನಲ್ಲಿ, ನನ್ನ ಸ್ವಾರ್ಥ  ಮರೆತದ್ದು ನನ್ನ ತಪ್ಪು.

ನನ್ನ ತಮ್ಮಂದಿರಲ್ಲಿ ಒಬ್ಬ ತನ್ನ ಹೆಂಡತಿಯ ತವರು ಮನೆಗೆ ಹೋಗಿ ಬದುಕಿ ಕೊಂಡ.  ಇನ್ನೊಬ್ಬ ಬೊಂಬಾಯಿಗೆ ಹೋದ. ನನ್ನ ಒಬ್ಬ ತಮ್ಮನನ್ನು ನಾನು ಮನೆಯಿಂದ ಹೊರ ಹಾಕಿದೆ. ಆತ ಹೊರಗೆ ಹೋಗಿ, ಏನೇನೋ ಕಿತಾಪತಿ ಮಾಡಿ ಬದುಕಿಕೊಂಡ. ಈ ತಮ್ಮ ಸ್ವಲ್ಪ ಪೋಲಿ. ಮದುವೆಯ ಮೊದಲೇ ಹುಡುಗಿಯರ ಹುಚ್ಚು ಹಿಡಿಸಿಕೊಂಡ. ಆತ ಹೇಗೆ  ನನ್ನ  ಹತೋಟಿಯಿಂದ ತಪ್ಪಿಸಿಕೊಂಡ ಅನ್ನುವುದೇ ನನಗೆ ಅರ್ಥವಾಗುತ್ತಿಲ್ಲ..

ನಮ್ಮ ಒಕ್ಕಲಿನ ಹುಡುಗಿಯ ಜೊತೆ ಸೇರಿದ. ಆಕೆ ಗರ್ಬಿಣಿಯಾದಳು. ಊರಿನ ಜನರಿಗೆ ಈ ಸುದ್ದಿ ಗೊತ್ತಾಗುವುದು ಬೇಡವೆಂದು, ರಾತ್ರೋ ರಾತ್ರಿ ಅವರನ್ನು ಒಕ್ಕಲು ಬಿಡಿಸಿ, ಊರಿನಿಂದ ಹೊರ ಹಾಕಿದೆ. ಅವರು ಎಲ್ಲಿ ಹೋದರು ಎಂಬುದು ನನಗೂ ಗೊತ್ತಾಗಲಿಲ್ಲ. ನನ್ನ ತಮ್ಮ, ಆನಂತರವೂ ಸುಧಾರಿಸಲಿಲ್ಲ. ಬೇರೆ ಹೆಣ್ಣುಗಳ ಬೆನ್ನು ಹಿಡಿದ. ಈ ವಿಷದ ಹಾವು ಮನೆಯಲ್ಲಿ ಇರುವುದು ಬೇಡವೆಂದು ಆತನನ್ನೆ ಮನೆಯಿಂದ ಹೊರ ಹಾಕಿದೆ. ಊರು ನನ್ನನ್ನು ಕೊಂಡಾಡಿತು.

ನನ್ನ ಎರಡನೆಯ ತಪ್ಪು ಆತನನ್ನು ಹೊರ ಹಾಕಿದ್ದು ಅಲ್ಲ. ನಾನು ಒಕ್ಕಲು ಬಿಡಿಸಿ ಆ ಬಡ ಜನರನ್ನು ಊರ ಹೊರಗೆ ಓಡಿಸಿದ್ದು.  ನನ್ನ ತಮ್ಮನ ತಪ್ಪಿಗೆ, ಮನೆತನದ ಗೌರವ ಉಳಿಸಲು ಆ ಬಡವರು ಬಲಿಯಾದರು. ಒಂದು ಹೆಣ್ಣಿನ ಬಗ್ಗೆ ಯೋಚಿಸದೆ, ಮನೆತನದ ಘನತೆಯ ಬಗ್ಗೆ ಯೋಚಿಸಿ, ಆ ಗರ್ಬಿಣಿ ಹೆಂಗಸಿಗೆ ಅನ್ಯಾಯ ಮಾಡಿದೆ. ಅದು ನಾನು ಮಾಡಿದ ಪಾಪದ ಕೆಲಸ.

ಈ ಎರಡೂ ನೋವು ನನ್ನನ್ನು ಯಾವಗಲೂ ಕಾಡುತ್ತಿದೆ ಮಗೂ. ನನ್ನ ಈ ನೋವನ್ನು ಯಾರಲ್ಲಿ ಹೇಳಿ ಕೊಳ್ಳಲಿ?

ನನ್ನ ತಮ್ಮನ ಹಿಂದೆ ನನ್ನ ತಂಗಿಯ ಮಕ್ಕಳು ಬೊಂಬಾಯಿತ್ತ ಓಡಿದರು. ಅವರಿಗೆ ಇಲ್ಲಿನ ಜೀವನ ಬೇಡವೆನಿಸಿತು. ಬೊಂಬಾಯಿಯ ಶೋಕಿ ಜೀವನ ಬೇಕಾಯಿತು. ಇಲ್ಲಿನ ಎಲ್ಲಾ ಆಸ್ತಿ ಕಳಕೊಂಡರು. ಈ ಮನೆ, ಅಲ್ಲ  ಅರಮನೆ ಪಾಳು ಬಿತ್ತು. ನಾನು ಮತ್ತು ನನ್ನ ಹಿರಿಯರು ಇಲ್ಲಿನ ಅಭಿವೃದ್ಧಿಗಾಗಿ ಪಟ್ಟ ಶ್ರಮ ಎಲ್ಲಾ ವ್ಯರ್ಥವಾಯಿತು. ಅದಕ್ಕೆ ಯಾವ ಬೆಲೆಯೂ ಇಲ್ಲದಂತಾಯಿತು.

ಇಲ್ಲಿನ ಜಾಗ ಕಳೆದುಕೊಂಡ ಮೇಲೆ, ಯಾರಿಗೂ ಇಲ್ಲಿನ ಮೋಹ, ಅಭಿಮಾನ ಇದ್ದ ಹಾಗಿಲ್ಲ. ಒಬ್ಬನೂ ಸಹ ಇತ್ತ ಮುಖ ಹಾಕಿಲ್ಲ. ನೀನೊಬ್ಬನೆ ನಮ್ಮ ಹಳೆಯ ಮನೆ, ನಮ್ಮ ಹಿರಿಯರ ಜಾಗ ಎಂದು ನೋಡುವ ಎಂದು ಬಂದವನು.

ಹೊತ್ತಾಯಿತು. ನನಗೆ ನಿದ್ದೆ ಬರುವುದಿಲ್ಲ. ನನ್ನ ಕಥೆಯೂ ಮುಗಿಯುವುದಿಲ್ಲ. ನೀನು ಹೋಗಿ ಮಲಗು ಅಂದರು ತಮ್ಮ ಯಜಮಾನಿಕೆಯ  ಧ್ವನಿಯಲ್ಲಿ.

*

ಬೆಳಗಾಯಿತು. ನಾನು ರಾತ್ರಿ ಕಂಡದ್ದು ನಿಜವೇ, ಕನಸ್ಸೇ? ಅಥವಾ ನನ್ನ ಸುಪ್ತ ಮನಸ್ಸು ಇಲ್ಲಿನ ಕಥೆಯನ್ನು ಅರ್ಥ ಮಾಡಿಕೊಂಡದ್ದು ಹಿಗೋ ಎಂದು ಗೊತ್ತಾಗಲಿಲ್ಲ.

ಚಾವಡಿಗೆ ಬರುತ್ತೇನೆ. ಅಲ್ಲಿ  ನಿನ್ನೆ ನಾನು ಹಗಲಿನಲ್ಲಿ ಗಮನಿಸಿದೆ ಇದ್ದ ಆರಾಮ ಕುರ್ಚಿ ಮತ್ತು ಊರುಗೋಲು ಇದೆ.

20th to 30th Oct, 2015

ತಂಗಿ

ಅಪ್ಪ ಸತ್ತಾಗ ನಾನಿನ್ನೂ ಚಿಕ್ಕವನು. ಆತನ ಮುಖದ ಮಸುಕು ನೆನಪು ಮಾತ್ರ ಇದೆ. ನನಗೊಬ್ಬ ತಂಗಿ ಇದ್ದಾಳೆ. ಆಕೆಯ ಹೆಸರು ಸುಮ. ನಾವೆಲ್ಲಾ ಕರೆಯುತ್ತಿದ್ದುದು ಪೊಟ್ಟಿ ಎಂದು. ನನಗೆ ಮದುವೆಯಾದ ನಂತರವೇ ನಾನಾಕೆಯನ್ನು ಸುಮ ಎಂದು ಕರೆಯಲು ಆರಂಭಿಸಿದ್ದು.

ಸುಮ ಹುಟ್ಟಿನಿಂದಲೇ ಕಿವುಡಿ ಮತ್ತು ಹಾಗಾಗಿ ಮೂಗಿ. ಅಮ್ಮನನ್ನು ಬಿಟ್ಟು ನಾವೆಲ್ಲಾ ಆಕೆಯನ್ನು ಪೊಟ್ಟಿ ಎಂದು ಕರೆಯುತ್ತಿದ್ದೆವು. ಅಮ್ಮ ಎಷ್ಟು ಬೈದರೂ ನಾನು, ಉಳಿದವರಂತೆ ಆಕೆಯನ್ನು ಪೊಟ್ಟಿ ಎಂದೇ ಕರೆಯುತ್ತಿದ್ದೆ. ಅಮ್ಮ ಈ ಬಗ್ಗೆ ಎಷ್ಟೋ ಸಲ ಕಣ್ಣೀರು ಸುರಿಸುತ್ತಿದ್ದಳು. ಆದರೆ ಪೊಟ್ಟಿಗೆ ನಾವು ಕರೆಯುತ್ತಿದ್ದ ಹೆಸರು ಕೇಳುತ್ತಿರಲಿಲ್ಲ.

ಆ ಕಾಲದಲ್ಲಿ ಇಂತಹ ಮಕ್ಕಳಿಗೆ ವಿಶೇಷ ಶಾಲೆಗಳಿದ್ದವೋ ಇಲ್ಲವೋ ಗೊತ್ತಿಲ್ಲ. ನಮ್ಮ ಹಳ್ಳಿಯಲ್ಲಿ ಅಂತೂ ಇರಲಿಲ್ಲ. ಹೆಣ್ಣು ಮಗುವನ್ನು ದೂರದ ಮಂಗಳೂರಿಗೆ ಕಳುಹಿಸಲು ಆವಾಗ ಸಾಧ್ಯವೂ ಇರಲಿಲ್ಲ. ನನಗೆ ಮದುವೆಯಾದ ಹೊಸದರಲ್ಲಿ,ಅಮ್ಮ  ನನ್ನ ಮತ್ತು ನನ್ನ ಹೆಂಡತಿಯ ಬಳಿ ಸುಮನನ್ನು ನಮ್ಮ ಕೈಗೆ ಒಪ್ಪಿಸಿ, ನಿಮ್ಮ ಮಗಳಂತೆ ಕಾಣಿರಿ. ನನ್ನ ದಿನ ಇನ್ನೆಷ್ಟೋ, ನನಗೆ ಆಕೆಯ ಮುಂದಿನ ಜೀವನದ ಚಿಂತೆ ಎಂದು ತುಂಬಾ ಭಾವುಕಳಾಗಿ ಹೇಳಿದ್ದಳು. ಅದಾದ ಒಂದು – ಒಂದೂವರೆ ತಿಂಗಳಲ್ಲಿ ಅಮ್ಮ ದೇವರ ಪಾದ ಸೇರಿದಳು. ಆಕೆಗೆ ಈ ಮೊದಲೇ ಸಾವಿನ ಸುಳಿವು ಸಿಕ್ಕಿತ್ತೋ ಅನ್ನುವ ಸಂಶಯ ನನ್ನನ್ನು ಇನ್ನೂ ಕಾಡುತ್ತಿದೆ.

ಸುಮಳ ಮದುವೆಗೆ ನಾವಿಬ್ಬರೂ ಪ್ರಯತ್ನಿಸಿದೆವು. ಮೀರಿದ ವಯಸ್ಸು, ಕಿವಿ ಕೇಳದ, ಮಾತು ಬಾರದ ಹುಡುಗಿಯನ್ನು ಯಾರು ಮದುವೆಯಾಗುತ್ತಾರೆ? ಅಂತಹ ಹುಡುಗರನ್ನು ಮದುವೆಯಾಗುತ್ತಾರೆ, ಆದರೆ ಹುಡುಗಿಯರನ್ನಲ್ಲ.

*

ನಮ್ಮ ಮಗಳನ್ನು ಸಾಕಿದ್ದು ಸುಮ. ಮಗಳ ಬಗ್ಗೆ , ನನ್ನ ಹೆಂಡತಿಗಿಂತಲೂ ಹೆಚ್ಚಿನ ಕಾಳಜಿ ವಹಿಸಿದ್ದು ಸುಮ. ಅಗಾಗ ನಾನು ತಮಾಶೆ ಮಾಡುವುದಿತ್ತು, ಹೆರಲು ಮತ್ತು ಎದೆ ಹಾಲು ಕೊಡಲು ನನ್ನ ಹೆಂಡತಿ, ಆಕೆಯ ನಿಜವಾದ ತಾಯಿ ಸುಮ ಎಂದು. ನನ್ನ ಹೆಂಡತಿ ಸುಮಳನ್ನು ಪ್ರೀತಿಯಿಂದಲೇ ಕಂಡಳು. ತನಗೆ ಬಟ್ಟೆ ಕೊಳ್ಳುವಾಗ ಸುಮಾಳಿಗೂ ಬಟ್ಟೆ ಕೊಳ್ಳುವುದು…. ಹೀಗೇ….

*

ಇಂದು ನನ್ನ ಮಗಳು ತನ್ನ ಸಹಪಾಠಿಗಳನ್ನು ಮನೆಗೆ ಕರೆದಿದ್ದಾಳೆ. ನಾನು ಮತ್ತು ನನ್ನಾಕೆ ಒಳ ಕೋಣೆಯಲ್ಲಿ ಇದ್ದೇವೆ, ಮಕ್ಕಳಿಗೆ ಮುಜುಗುರವಾಗುವುದು ಬೇಡವೆಂದು. ಸುಮ ಅಡಿಗೆ ಮನೆಯಲ್ಲಿ. ಮಕ್ಕಳ ಕೇ ಕೇ ಜೋರಾಗಿಯೇ ಇದೆ. ಸುಮ ಮಕ್ಕಳಿಗೆ ತಿಂಡಿ ತಂದಿರ ಬೇಕು. ಯಾರೋ ಒಬ್ಬ ಹುಡುಗ, ನಮಸ್ತೆ ಆಂಟಿ ಅನ್ನುತ್ತಾನೆ. ಯಾರೋ ಸುಮಳನ್ನು ಯಾರೆಂದು ಕೇಳುತ್ತಾರೆ. ನನ್ನ ಮಗಳು, ಅವರ್ ಸರ್ವೆಂಟ್ ಅನ್ನುತ್ತಾಳೆ.

ನನ್ನ ಕೈ ಸಿಟ್ಟಿನಿಂದ ಮುಸ್ಟಿಕಟ್ಟುತ್ತದೆ, ಹೊರ ಹೋಗುವ ನನ್ನನ್ನು ಹೆಂಡತಿ ಕೈ ಹಿಡಿದು ನಿಲ್ಲಿಸುತ್ತಾಳೆ. ಆಕೆಯ ಕಣ್ಣಲ್ಲಿ ನೀರು.

ಒಂದು ಹೆಣ್ಣು ಮಗಳು, ಕೆಲಸದವಳ ಕೈಯಲ್ಲಿ ಬಂಗಾರದ ಬಳೆ, ಇಷ್ಟು ಒಳ್ಳೆಯ ಸೀರೆ…. ಅನ್ನುವ ಮಾತು ಮಗಳ ಗೆಳತಿಯ ಬಾಯಿಯಿಂದ.

ನಮ್ಮ ಮಗಳು, ಮೈ ಪೇರೆಂಟ್ಸ್ ಆರ್ ಗ್ರೇಟ್ ಅನ್ನುತ್ತಾಳೆ. ಒಂದು ಹುಡುಗ ಕುಹಕ ನಗು ನಕ್ಕ ಸದ್ದು. ಇನ್ನೊಬ್ಬ, ಇವ ಕೆಲಸದವಳಿಗೆ, ನಮಸ್ತೆ ಆಂಟಿ ಅಂದ. ಎಲ್ಲಾ ಮಕ್ಕಳು ಜೋರಾಗಿ ನಗುತ್ತಾರೆ. ಏನೇನೋ ತಮಾಶೆಯ, ಕುಹುಕದ ಮಾತುಗಳು.

ನನ್ನ ಮಗಳು, ಶಟ್ ಅಪ್… ಎಂದು ಜೋರಾಗಿ ಚೀರಿದ್ದು ಕೇಳುತ್ತದೆ. ಮೌನ.

ಐ ಯ್ಯಾಮ್ ಸಾರಿ. ಶಿ ಈಸ್ ಮೈ ಆಂಟಿ, ನಾಟ್ ಸರ್ವಂಟ್. ಐ ಯ್ಯಾಮ್ ಸೋ ಸಾರಿ. ಪ್ಲೀಸ್ ನೀವೆಲ್ಲಾ ಹೋಗಿ. ನನ್ನನ್ನು ಒಬ್ಬಳನ್ನೇ ಇರಲು ಬಿಡಿ ಅನ್ನುತ್ತಾಳೆ. ಮಕ್ಕಳು ಒಬ್ಬೊಬ್ಬರೇ ಹೋಗುತ್ತಾರೆ. ಹೋಗುವಾಗ ಕೆಲವರು ಆಕೆಗೆ ಸಾಂತ್ವಾನ ಹೇಳುತ್ತಾರೆ.

ನಾನು ಮತ್ತು ನನ್ನಾಕೆ ಹೊರ ಬರುತ್ತೇವೆ. ನನ್ನಾಕೆ ಮಗಳ ಕೆನ್ನೆಗೆ ಹೊಡೆಯುತ್ತಾಳೆ. ಸುಮಾ ಓಡಿ ಬಂದು ಅವರಿಬ್ಬರ ನಡುವೆ ನಿಲ್ಲುತ್ತಾಳೆ. ಮಗಳು ಸುಮಾಳ ಕಾಲು ಹಿಡಿದು, ನನ್ನದು ತಪ್ಪಾಯಿತು ಆಂಟಿ ಎಂದು ಅಳುತ್ತಾಳೆ. ನನ್ನ ಹೆಂಡತಿ, ನಿನ್ನನ್ನು ತನ್ನ ಮಗಳಂತೆ ಸಾಕಿದ ಅತ್ತೆಯನ್ನು ಸರ್ವೆಂಟ್ ಅನ್ನಲು ನಿನಗೆ ಎಷ್ಟು ಕೊಬ್ಬು? ಅನ್ನುತ್ತಾ ಬೈಯುತ್ತಿದ್ದಾಳೆ. ನಾನು ಆಕೆಯ ಬುಜ ತಟ್ಟಿ ಸುಮ್ಮನಿರುವಂತೆ ಸೂಚಿಸಿದೆ. ಏನೂ ಗೊತ್ತಿಲ್ಲದ ಸುಮಾ ಮಗಳನ್ನು ಅಡಿಗೆಯ ಮನೆಗೆ ಕರೆದುಕೊಂಡು ಹೋಗುತ್ತಾಳೆ.

*

ರಾತ್ರಿ ಮಗಳು, ನಿಮ್ಮಿಬ್ಬರ ಬಳಿ ಮಾತನಾಡಲು ಇದೆ ಎಂದು ನಮ್ಮ ಕೋಣೆಗೆ ಬರುತ್ತಾಳೆ.

ಮಮ್ಮೀ, ನಾನು ಆಂಟಿಗೆ ಸರ್ವೆಂಟ್ ಎಂದು ಹೇಳಿ ದೊಡ್ಡ ತಪ್ಪು ಮಾಡಿದೆ. ಅವರಿಗೆಲ್ಲಾ ಆಕೆ ಡಂ ಮತ್ತು  ಡಫ್ ಎಂದು ಗೊತ್ತಾಗುವುದು ಬೇಡವೆಂದು ನಾನು ಆ ಮಾತು ಅಂದೆ. ನನ್ನ ತಪ್ಪು ಮುಚ್ಚಲು ನಿಮ್ಮ ಬಗ್ಗೆ ಗ್ರೇಟ್ ಅಂದೆ. ನಾನು ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ನೀವು?

ನಾವಿಬ್ಬರೂ ಮುಖ ಮುಖ ನೋಡಿಕೊಂಡೆವು. ಮಮ್ಮೀ, ನಿನ್ನ ಬಳಿ ಎಷ್ಟು ಸೀರೆ ಇವೆ, ಆಂಟಿಯ ಬಳಿ ಎಷ್ಟು ಸೀರೆ ಇವೆ? ನಿನ್ನ ಸೀರೆಯ ಬೆಲೆ ಏನು, ಆಂಟಿಯದು ಎಷ್ಟು? ಮಮ್ಮೀ, ತೋರಿಕೆಗೆ ನೀವು ಆಂಟಿಯ ಕೇರ್ ತೆಗೆದುಕೊಳ್ಳುತ್ತಿದ್ದೀರಿ. ನೀವು ಆಕೆಯನ್ನು ಕೆಲಸದ ಆಳಿನಂತೆ ನೋಡುತ್ತಿಲ್ಲ, ಆದರೆ ಆಕೆಯನ್ನು ನಿಮ್ಮ ಯಾ ನನ್ನ ಇಕ್ವಲ್ ಆಗಿ ನೋಡುತ್ತಿಲ್ಲ. ಆಕೆಯ ಒಳ ಬಟ್ಟೆಗಳು ಹರಿದಿವೆ ಅಂತ ನಿಮಗೆಂದಾದರೂ ಗೊತ್ತಾಗಿತ್ತೇ? ನಿಮ್ಮದು ಹರಿದಿದೆಯೇ? ನಿಮ್ಮ ಹಾಸಿಗೆಯ ಕುಶನ್   ಎಷ್ಟು ಚೆನ್ನಾಗಿವೆ, ಆಂಟಿಯ ಹಾಸಿಗೆ ನೋಡಿದ್ದೀರಾ? ಗಂಟು ಗಂಟು ಇದೆ. ಅವರು ಅದರಲ್ಲಿ ಹೇಗೆ ಮಲಗುತ್ತಾರೋ ಗೊತ್ತಾಗುತ್ತಿಲ್ಲ. ನಾನು ಸರ್ವೆಂಟ್ ಅಂದದ್ದಕ್ಕೆ ಸ್ವಾರಿ ಅಂದೆ. ನೀವು? ನಿಮ್ಮದು ಹಿಪೋಕ್ರಸಿ ಮಮ್ಮಿ, ಡ್ಯಾಡೀ….

ಮಗಳು ಬಿಕ್ಕಿ ಬಿಕ್ಕಿ ಅಳುತ್ತಾಳೆ. ನಾನು ಆಕೆಯ ತಲೆ ಸವರುತ್ತೇನೆ, ನನ್ನನ್ನು ನಾನು ಪ್ರಶ್ನಿಸುತ್ತಾ…..

೧.೦೮.೨೦೧೫