ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ:

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ: ರಾಜೇಂದ್ರ ಬಿ. ಶೆಟ್ಟಿ

March 4th, 2013 content-editor

[ ಪಂಜು-ವಿಶೇಷ ]

http://www.panjumagazine.com/?p=1185

ಯೋಗ ಅಂದರೆ ಏನೋ ಒಂದು ಅಲರ್ಜಿ. ಮಾಧ್ಯಮದವರು ಸುಮ್ಮನೆ ವಿಪರೀತ ಪ್ರಚಾರ ಕೊಡುತ್ತಿದ್ದಾರೆ ಅನ್ನುವ ಭಾವನೆ ನನ್ನಲ್ಲಿ ಬೇರೂರಿತ್ತು. ಮಂಗಳೂರಿನಿಂದ ಆಗಾಗ ದೂರವಾಣಿಯ ಮೂಲಕ ನನಗೆ ಕರೆ – ಒಂದು ವಾರ ಇದ್ದು ಯೋಗ ಕಲಿತು ಹೋಗಿ. ಆಮೇಲೆ ನೋಡಿ ನಿಮ್ಮಲ್ಲಿ ಆಗುವ ಬದಲಾವಣೆ. ಒಲ್ಲದ ಮನಸ್ಸಿನಿಂದ ಹೋದೆ. ಯೋಗದ ಮೊದಲ ಅಭ್ಯಾಸದಲ್ಲೇ ನನ್ನ ಅಭಿಪ್ರಾಯ ಬದಲಾಯಿತು ಎಂದು ಹೇಳುವ ಅಗತ್ಯವಿಲ್ಲ ಅನಿಸುತ್ತದೆ. ಮೊದಲ ಕ್ಲಾಸಿನ ಕೊನೆಯಲ್ಲಿ ನನ್ನ ಮುಖದಲ್ಲಿ ಮಂದಹಾಸವಿತ್ತು.

ಮಗು ಒಂದು ಬಾವಿಗೆ ಬಿದ್ದು, ಆಶ್ಚರ್ಯಜನಕ ರೀತಿಯಲ್ಲಿ ಬದುಕಿ ಉಳಿಯುತ್ತದೆ. ಆ ಮಗು ಚಿಕ್ಕದಿರುವಾಗಲೇ ಪಟೇಲರಾಗಿದ್ದ ತಂದೆಯನ್ನು ಕಳಕೊಂಡು, ಶಾಲೆಗೆ ಮೂರು ಮೂರು ಮೈಲು ನಡೆದು, ಆಗಾಗ ಜ್ವರ ಪೀಡಿತವಾಗಿದ್ದು, ಕಷ್ಟದಿಂದ ಬೆಳೆದು ಮುಂದೊಂದು ದಿನ ‘ಯೋಗರತ್ನ’ ಎನ್ನುವ ಬಿರುದು ಪಡೆಯುತ್ತದೆ.

ಮೊದಲ ಸಲ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಕಂಡಾಗ ಅವರಲ್ಲಿ ಏನೋ ಆಕರ್ಷಣೆ ಕಂಡೆ. ನಗು ಮುಖದ ಸರಳ ವ್ಯಕ್ತಿ. ದೇಶದಾದ್ಯಂತ ಯೋಗದಲ್ಲಿ ಹೆಸರು ಮಾಡಿದ್ದರೂ ಆ ಬೂಟಾಟಿಕೆಯಾಗಲಿ, ಹೆಗ್ಗಳಿಕೆಯಾಗಲಿ ಅವರಲ್ಲಿ ಕಾಣಲಿಲ್ಲ.

ದೇಲಂಪಾಡಿಯವರಿಗೆ  ಅದೃಷ್ಟಕ್ಕೆ ೧೯೭೩ ರಲ್ಲಿ ಸುಳ್ಯದ ಪುಟ್ಟಪ್ಪ ಜೋಶಿಯವರ ಪರಿಚಯ ಆಯಿತು. ಅವರ ಮೂಲಕ ಯೋಗ ಶಿಕ್ಷಣ. ನಂತರ ಕಾಲೇಜಿನಲ್ಲಿರುವಾಗ  ವಿಟ್ಲದ ಚಿದಾನಂದ ಅವರ ಮೂಲಕ ಇನ್ನೂ ತರಬೇತಿ ಪಡೆಯುತ್ತಾರೆ. ನಂತರ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಕೆಲಸ. ಮಧ್ಯದಲ್ಲಿ ಬೇರೆಯವರಿಗೆ ಯೋಗ ತರಬೇತಿ ಕೊಡುವ ಹವ್ಯಾಸ. ೨೦೦8 ರಲ್ಲಿ ಸ್ವನಿವೃತ್ತಿಯ ನಂತರ ಯೊಗ ತರಬೇತಿಯಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಲಕ್ಷಕ್ಕೂ ಮಿಕ್ಕಿದ ಮಂದಿಗೆ ಯೋಗ ತರಬೇತಿ ನೀಡಿದ್ದಾರೆ. ಇವರ ಅನೇಕ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅನೇಕ ಗಣ್ಯರು ಇವರ ವಿದ್ಯಾರ್ಥಿಗಳು. ಇದನ್ನೆಲ್ಲ ಅವರು ಹೇಳಿಕೊಳ್ಳುವುದಿಲ್ಲ. ಪತ್ರಿಕೆಗಳಲ್ಲಿ ಓದಿದ್ದು ಹಾಗೂ ಅವರ ವಿದ್ಯಾರ್ಥಿಗಳು ಹೇಳಿದ್ದು. ಇವರಿಗೆ ಸಿಕ್ಕ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅನೇಕ ರಾಷ್ಟ್ರ, ಅಂತರರಾಷ್ಟ್ರೀಯ ಯೋಗ ಸ್ಪರ್ಢೆಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ವಿದ್ಯಾರ್ಥಿಗಳೇ ಇಂದು ಯೊಗ ತರಬೇತಿ ಕೊಡುತ್ತಿದ್ದಾರೆ.

ಇವರು ತಮ್ಮ ತರಬೇತಿಗೆ ಚಾರ್ಜ್ ಮಾಡುವುದಿಲ್ಲ. ಅವರ ಗುರುಗಳು ಶ್ರೀ ಜೋಶಿಯವರ ಮಾತಿನಂತೆ ಯೋಗ ಮಾರಾಟದ ವಸ್ತು ಅಲ್ಲ ಎಂದು ಉಚಿತವಾಗಿ ಹೇಳಿ ಕೊಡುತ್ತಾರೆ. ಮತ್ತೆ ಜೀವನ ನಿರ್ವಹಣೆ? ಗುರುದಕ್ಷಿಣೆ ಕೊಡುತ್ತಾರೆ. ಯಾರಿಗೂ ಇಂತಿಷ್ಟೇ ಕೊಡಿ ಎಂದು ಹೇಳುವುದಿಲ್ಲ. ಹಾಸಿಗೆ ಇದ್ದಷ್ಟೆ ಕಾಲು ಚಾಚು ಅನ್ನುವುದನ್ನು ಅನುಸರಿಸುತ್ತೇನೆ ಅನ್ನುತ್ತಾರೆ.

೧೯೭೭ ರಲ್ಲಿ ಪ್ರಥಮ ಯೋಗದ ಪ್ರದರ್ಶನ. ೧೯೮೩ರಲ್ಲಿ ಲಯನ್ಸ್ ಕ್ಲಬ್ ನ ವತಿಯಿಂದ ಇವರದೇ ಆದ ಪ್ರಥಮ ಯೋಗ ಶಿಬಿರ. ನಂತರ ನಿರಂತರವಾಗಿ ಯೋಗ ಶಿಬಿರ ನಡೆಸುತ್ತಿದ್ದಾರೆ. (ನಿರಂತರವಾಗಿ೩೦ ವರ್ಷಗಳಿಂದ ೮೦೦ ಕ್ಕೂ ಹೆಚ್ಚು ಯೋಗ ಶಿಬಿರ ನಡೆಸಿದ್ದಾರೆ. ಇದನ್ನು ಓದುಗರು ಗಮನಿಸಬೇಕು) ಓದು ಮತ್ತು ಬರೆಯುವುದು ಇವರ ಹವ್ಯಾಸ. ಅನೇಕ ಹೆಸರಾಂತ ಪತ್ರಿಕೆಗಳಲ್ಲಿ ಯೋಗದ ಬಗ್ಗೆ ಇವರ ನೂರಾರು ಲೇಖನಗಳು ಪ್ರಕಟವಾಗಿವೆ. ಸುಮಾರು ಒಂದು ವರ್ಷದಿಂದ ಟೀವಿಯೊಂದರಲ್ಲಿ ಪ್ರತೀ ವಾರ ಯೋಗ ತರಬೇತಿಯನ್ನು ಕೊಡುತ್ತಿದ್ದಾರೆ. ಬೆಳಿಗ್ಗೆ ಆರು ಘಂಟೆಗೆ ಇವರ ಪ್ರಥಮ ಯೋಗದ ಕ್ಲಾಸ್ ಆರಂಭವಾದರೆ ಅದು ರಾತ್ರಿಯವರೆಗೂ ನಡೆಯುತ್ತದೆ. ದಿನಕ್ಕೆ ಬರೇ ೬ ಘಂಟೆ ವಿಶ್ರಾಂತಿ. ಯೋಗದ ಕಾರಣದಿಂದ ಆಯಾಸ ವಾಗುವುದಿಲ್ಲ ಅನ್ನುತ್ತಾರೆ.

ಯೋಗ ಸರ್ಕಸ್, ಮ್ಯಾಜಿಕ್ ಅಲ್ಲ. ಇದು ಶಿಸ್ತುಬದ್ದವಾಗಿ, ಕ್ರಮಬದ್ದವಾಗಿ ಉಸಿರಿನ ಗತಿಯೊಂದಿಗೆ ಮಾಡುವ ವಿಧಾನ.. ಶಾಲೆಗಳಲ್ಲಿ ಯೋಗ ಕಲಿಸಬೇಕು. ಶಿಸ್ತು ಬದ್ದ ಜೀವನಕ್ಕೆ, ಆರೋಗ್ಯ ರಕ್ಷಣೆಗೆ, ಉತ್ತಮ ಜೀವನ ಶೈಲಿಗಾಗಿ ಯೋಗ ಸಹಕಾರಿ. ಅದು ಪರಮಾತ್ಮನ ಜೀವಾತ್ಮನ ಮಿಲನದ ಸಾಕ್ಷಾತ್ಕಾರಕ್ಕೆ ದಾರಿ ಅನ್ನುತ್ತಾರೆ ದೇಲಂಪಾಡಿಯವರು. ಯೋಗ ಏಕಾಗ್ರತೆಯನ್ನು ಹೆಚ್ಚುಮಾಡಲು ಸಹಕಾರಿ. ಮನಸ್ಸಿನ ಪ್ರಸನ್ನತೆಗೆ, ಮನಸ್ಸಿನ ತಳಮಳ ಕಡಿಮೆ ಮಾಡುವಲ್ಲಿ, ದೈನಂದಿನ ಚಟುವಟಿಕೆಯ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.

ಜನರ ಆರೋಗ್ಯದ ಬಗೆಗೆ ದೇಲಂಪಾಡಿಯವರಿಗೆ ತುಂಬಾ ಕಳಕಳಿ ಇದೆ. ಅಮೇರಿಕಾ, ಜಪಾನ್, ರಷ್ಯಾ, ಆಫ್ರಿಕಾ ದೇಶಗಳಲ್ಲಿ ಆರೊಗ್ಯ ರಕ್ಷಣೆಯ ಬಗೆಗೆ ಏನೆಲ್ಲಾ ನಡೆಯುತ್ತದೆ ಎಂದು ನನ್ನೊಡನೆ ಮಾತನಾಡಿದರು. ನಿಮಗೆ ಯಾವುದೇ ದೈಹಿಕ ತೊಂದರೆ ಇದ್ದರೆ ವೈದ್ಯರ ಬಳಿ ಹೋಗಿ. ಔಷಧ ತೆಗೆದುಕೊಳ್ಳಿ. ಯೋಗ ಮಾಡಿ. ಕೆಲವು ದೈಹಿಕ ತೊಂದರೆಗಳಿಗೆ ಕೆಲವು ಯೋಗಾಸನಗಳನ್ನು ಮಾಡಕೂಡದು. ಹಾಗಾಗಿ ತಾನು ಪ್ರತಿಯೊಬ್ಬ ವಿದ್ಯಾರ್ಥಿಯ ತೊಂದರೆಗಳನ್ನು ತಿಳಿದುಕೊಂಡು, ಅವರಿಗೆ ಬೇಕಾದ ಯೋಗಗಳನ್ನು ಮಾತ್ರ ತಿಳಿಸಿಕೊಡುತ್ತೇನೆ. ಯೋಗ ಕಠಿಣ ಹಾಗೂ ನೈಸರ್ಗಿಕ  ಮಾರ್ಗ, ಯೋಗ  ಆರೊಗ್ಯ ವರ್ಧಕ,  ರೋಗ ನಿವಾರಕ  ರೋಗ ನಿರೋಧಕ ಅನ್ನುತ್ತಾರೆ ದೇಲಂಪಾಡಿಯವರು.

ಯೋಗದ ಜೊತೆಗೆ ಕೆಲವು ಮುದ್ರೆಗಳನ್ನು ಸಹ ಅಭ್ಯಸಿಸಬೇಕು. ಮುದ್ರೆ, ನಮ್ಮ ಕೈಗಳ ಮುಖಾಂತರ ಹೊರ ಚೆಲ್ಲುವ ಚೈತನ್ಯವನ್ನು ಒಳ ಬರುವಂತೆ ಮಾಡುತ್ತದೆ. ಅನೇಕ ರೋಗಗಳ ಪ್ರಭಾವ ಕಡಿಮೆ ಆಗುತ್ತದೆ. ಮುದ್ರೆಗಳನ್ನು ಯಾವಾಗ ಬೇಕಾದರೂ ಮಾಡಬಹುದು – ನೀವು ಪ್ರಯಾಣಿಸುವಾಗ, ಟೀವಿ ವೀಕ್ಷಿಸುವಾಗ, ನಿಮ್ಮ ವಿರಾಮದ ಸಮಯದಲ್ಲಿ ಮುದ್ರೆ ಮಾಡಬಹುದು.

ಟೀವಿಯ ಮುಖಾಂತರ ಯೋಗದ ಜನಪ್ರಿಯತೆ ಹೆಚ್ಚಿದೆ. ಕಮರ್ಶಿಯಲ್ ಆಗುವ ಭಯ ಇದೆ. ಯೋಗವನ್ನು ಗುರುಮುಖೇನ ಕಲಿಯಬೇಕು. ನಂತರ ಟೀವಿ ನೋಡಿ ಅಭ್ಯಾಸ ಮಾಡಬಹುದು. ಆದರೆ ಯೋಗದಲ್ಲಿ ಅವಸರ ಸಲ್ಲದು, ಮೆತ್ತಗೆ ಮಾಡಬೇಕು ಇವೆಲ್ಲಾ ಅವರ ಕೆಲವು ಅಭಿಪ್ರಾಯಗಳು.

ಮಕ್ಕಳಿಗೆ ಚಿಕ್ಕಂದಿನಿಂದಲೇ ಯೋಗದ ತರಬೇತಿ ಆಟದ ಮೂಲಕ ನೀಡಬೇಕು. ಇದು ಅವರ ಶಿಸ್ತಿಗೆ, ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಮುಂದೆ ನಮಗೆ ಶಿಸ್ತುಬದ್ದ, ಆರೋಗ್ಯಪೂರ್ಣ ಸಮಾಜದ ಬೆಳವಣಿಗೆ ಆಗುತ್ತದೆ ಅನ್ನುವ ಅಭಿಪ್ರಾಯ ದೇಲಂಪಾಡಿಯವರದು.

ಅವರಿಗೆ ಅತೀ ಸಂತೋಷ ತಂದ ವಿಷಯ: ಕೆಲವು ಹಿರಿಯರು ಬಂದು ಯೋಗದಿಂದ ತಮ್ಮ ದೈಹಿಕ ತೊಂದರೆಗಳು ಕಡಿಮೆ ಆದವು ಎಂದು ಹೇಳಿದಾಗ. ನನ್ನ ಶ್ರಮ ಸ್ವಾರ್ಥಕ ಆಯಿತು ಅನ್ನುತ್ತಾರೆ ತೃಪ್ತಿಯ ನಗುವಿನಿಂದ.

ನಗರದ ಯಾವುದಾದರೂ ಒಂದು ನಿಶ್ಚಿತ ಭಾಗದಲ್ಲಿ, ನಿಶ್ಚಿತ ಸಮಯದಲ್ಲಿ ನಿರಂತರ ಸಾಮೂಹಿಕ ಯೋಗದ ತರಬೇತಿ ಇದ್ದರೆ ಉತ್ತಮ. ಅಲ್ಲಿ ತಾನು ಉಚಿತ ಯೋಗ ಅಭ್ಯಾಸ ಕೊಡಲು ಸಿದ್ದನಿದ್ದೇನೆ. ಇದಕ್ಕಾಗಿ ಯಾರಾದರೂ ಮಹನೀಯರು ಮುಂದೆ ಬಂದು ಬೇಕಾದ ವ್ಯವಸ್ಥೆ ಮಾಡಿದರೆ ತುಂಬಾ ಒಳ್ಳೆಯದಿತ್ತು ಅನ್ನುತ್ತಾರೆ. ಇದೊಂದು ಅವರ ಆಸೆ

ಅವರ ಪತ್ನಿಯವರು ಸಹ ಪತಿಯ ಮಾರ್ಗ ಅನುಸರಿಸುತ್ತಿದ್ದಾರೆ. ಸ್ತ್ರೀಯರಿಗೆ ಯೋಗದ ತರಬೇತಿ ಕೊಡುವಲ್ಲಿ ಪತಿಯ ಜೊತೆಗೂಡಿದ್ದಾರೆ. ಅವರ ಇಬ್ಬರು ಮಕ್ಕಳು ವೃತ್ತಿಪರ ಕಾಲೇಜುಗಳಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದಾರೆ. ಅವರಿಬ್ಬರೂ ಯೋಗದ ಅನೇಕ ಪ್ರದರ್ಶನಗಳಲ್ಲಿ ಹೆಸರು ಗಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಶ್ರೀ ಕೆ. ಸತ್ಯನಾರಾಯಣ ಗಟ್ಟಿಗಾರುರವರು ಹೇಳುವಂತೆ, ”ತರಬೇತಿ ನೀಡುವ ಪೂರ್ವ ಸಿದ್ದತೆಯಿಂದ ಹಿಡಿದು ಆಸನದ ಭಂಗಿ, ದೈಹಿಕ ಹಾಗೂ ಮಾನಸಿಕವಾಗಿ ಸಿಗುವ ಪ್ರಯೋಜನಗಳು, ಸರಳ ಆಸನಗಳ ಕುರಿತು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಾ ಹೋಗುವ ಇವರ ಶ್ರೇಣಿ ಎಂತಹ ದಡ್ಡರಲ್ಲೂ ಚೈತನ್ಯ ತುಂಬಿ, ಆಲಸಿಯ ನರ ನಾಡಿಗಳಲ್ಲಿ ಉತ್ಸಾಹ ಹೆಚ್ಚಿಸಬಲ್ಲದು. ಸತತ ಪರಿಶ್ರಮ, ತಾಳ್ಮೆ ಮತ್ತು ಓದಿ ತಿಳಿದು ಯೋಗದಲ್ಲಿ ಅಗಾಥ ಸಾಧನೆಗೈದ ಇವರದು ಸರಳ ಸಜ್ಜನಿಕೆಯ ಸದಾ ಹಸನ್ಮುಖಿ ಹಾಗೂ ಸ್ನೇಹಶೀಲ ವ್ಯಕ್ತಿ.”

ಮಂಗಳೂರಿನ ಶ್ರೀ ಕೆ. ಕೃಷ್ಣಕುಮಾರರು ಹೇಳುವ ಹಾಗೆ, “ಸಮಾಜದ ಸ್ವಾಸ್ಥ್ಯ ನಿರ್ವಹಣೆಗೆ ಯೋಗವೇ ಯೋಗ್ಯ ಎಂದು ನಂಬಿ ಜೀವನವನ್ನೇ ಯೋಗಕ್ಕಾಗಿ ಮುಡಿಪಗಿಟ್ಟು ನಿಸ್ವಾರ್ಥವಾಗಿ ಯೋಗ ಸೇವೆ ಸಲ್ಲಿಸುತ್ತಾ ಯೋಗ ಕಲೆಯ ಪ್ರಚಾರವನ್ನು ಸದ್ದಿಲ್ಲದೇ ಮಾಡುತ್ತಿರುವ ಶ್ರೀ ದೇಲಂಪಾಡಿಯವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇವರಿಗೆ ಹೆಚ್ಚಿನ ಪ್ರೋತ್ಸಾಹ ದೊರಕಿದಲ್ಲಿ ದೇಶ ವಿದೇಶಗಳಲ್ಲಿ ಭಾರತೀಯ ಯೋಗ ಕಲೆಯನ್ನು ಜನಪ್ರಿಯಗೊಳಿಸುವುದು ಖಂಡಿತ”.

ದೇಲಂಪಾಡಿಯವರು ಯೋಗದ ಬಗೆಗೆ ಕೆಲವು ಪುಸ್ತಕ ಬರೆದಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಯೋಗ (ಐದು ಬಾರಿ ಮುದ್ರಣ ಕಂಡಿದೆ), ಉತ್ತಮ ಜೀವನ ಶೈಲಿಗಾಗಿ ಯೋಗ (ಎರಡು ಬಾರಿ ಮುದ್ರಣವಾಗಿದೆ), ಯಾವ ರೋಗಿಗೆ ಯಾವ ಯೋಗ, ಯೋಗದಿಂದ ಯೋಗ್ಯ ವಿದ್ಯಾರ್ಥಿ ಮತ್ತು ಅನೇಕ ಕಿರು ಲೇಖನಗಳು.

ಪ್ರಕಟಗೊಳ್ಳಲಿರುವ ಪುಸ್ತಕಗಳು: ಗರ್ಭಿಣಿ ಸ್ತ್ರೀಯರಿಗಾಗಿ ಯೋಗ ಹಾಗೂ Yoga – Key to better health and new life

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರಿಗೆ ಸಿಕ್ಕ ಕೆಲವು ಪ್ರಶಸ್ತಿಗಳು:

ಯೋಗ ರತ್ನ (೧೯೯೯),  ಯೋಗಾಚಾರ್ಯ (೨೦೦೬),  ಕರ್ನಾಟಕ ಯೋಗ ರತ್ನ, (೨೦೦೮)

ದಸರಾ ಯೋಗ ಸಿರಿ (೨೦೦೮),  ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ(೨೦೦೮),  ಯೋಗಕಲಾ ಕೌಸ್ತೌಭಾ (೨೦೦೯)

ಯೋಗಕಲಾ ಪ್ರವೀಣ (೨೦೧೦),  ವಿಶ್ವ ಯೋಗ ನಿಧಿ (೨೦೧೦),  ಯೋಗ ತಜ್ಞಾ (೨೦೧೦),  ಪತಂಜಲಿ ಮಹರ್ಷಿ (೨೦೧೧)

ಎಲೆಮರೆಯ ಕಾಯಿಯಂತೆ, ಸದ್ದಿಲ್ಲದೆ ಮಂಗಳೂರಿನಲ್ಲಿ ಯೋಗದ ಪ್ರಚಾರ ಮಾಡುತ್ತಾ, ಮುಂದಿನ ಜನಾಂಗದ ಆರೋಗ್ಯದ ಕಾಳಜಿ ಇರುವ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರಿಗೆ ಈ ಮೂಲಕ ಶುಭ ಹಾರೈಸುತ್ತೇನೆ.

Website : www.delampady.webs.com

-ರಾಜೇಂದ್ರ ಬಿ. ಶೆಟ್ಟಿ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s